ಮಡಿಕೇರಿ, ಮಾ. 5: ಐನ್‍ಮನೆಯ ಮಾದರಿಯ ವೇದಿಕೆ.. ವಿದ್ಯುತ್ ಅಲಂಕಾರದ ಜಗಮಗ... ವೇದಿಕೆಯ ಬ್ಯಾಕ್‍ಸ್ಕ್ರೀನ್‍ನಲ್ಲಿ ಗಂಭೀರ ವದನದ ವೀರ ಸೇನಾನಿ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಭಾವಚಿತ್ರದೊಂದಿಗೆ ಅವರ ಹೆಸರಿನ ವೇದಿಕೆಯಲ್ಲಿ ಫೆ. 26ರಂದು ಮಂಜಿನ ನಗರಿ ಮಡಿಕೇರಿಯಲ್ಲಿ ನಡೆದ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮ ಸಫಲತೆ ಕಂಡಿತು.

ದೂರದರ್ಶನ ಕೇಂದ್ರ ಬೆಂಗಳೂರು, ಕೊಡವ ಅಕಾಡೆಮಿ ಹಾಗೂ ಮಡಿಕೇರಿ ಆಕಾಶವಾಣಿಯ ಸಹಯೋಗದಲ್ಲಿ ಜರುಗಿದ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮದ 86ನೇ ಕಾರ್ಯಕ್ರಮ ಪ್ರಥಮ ಬಾರಿಗೆ ಕೊಡಗು ಜಿಲ್ಲೆಯಲ್ಲಿ ನಡೆಯಿತು.

ವಿಶೇಷವಾಗಿ ಈ ಕಾರ್ಯಕ್ರಮ ದಲ್ಲಿ ಕೊಡವ ಅಕಾಡೆಮಿಯ ಪ್ರಯತ್ನ ಹೆಚ್ಚಿತ್ತು. ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರ ಉಸ್ತುವಾರಿಯಲ್ಲಿ ಕೊಡವ ಸಮುದಾಯದ ಕಲೆ ಮತ್ತು ಸಂಸ್ಕøತಿ ಬಿಂಬಿಸುವದರೊಂದಿಗೆ ಹಾಗೂ ಹಳೆಯ ಕನ್ನಡ ಚಿತ್ರಗೀತೆಗಳ ಸಮ್ಮಿಲನವಾಗಿದ್ದ ಈ ಕಾರ್ಯಕ್ರಮ ಜನಮನ ಸೆಳೆಯಿತು. ನಿರೀಕ್ಷಿಸದ ಮಾದರಿಯಲ್ಲಿ ಗಾಂಧಿ ಮೈದಾನದಲ್ಲಿ ಸಂಗೀತಾಸಕ್ತರು ಕಿಕ್ಕಿರಿದು ನೆರೆದಿದ್ದುದು ಗಮನಾರ್ಹವಾಗಿತ್ತು.

ರಾಜ್ಯಮಟ್ಟದ ಕಾರ್ಯಕ್ರಮ ವಾದರೂ ಬಹುತೇಕ ಕೊಡಗು ಜಿಲ್ಲೆಯ ಕಲಾವಿದರುಗಳೇ ಅವಕಾಶ ಪಡೆದಿದ್ದರು. ಕನ್ನಡ ಚಿತ್ರಗೀತೆ ಯೊಂದಿಗೆ ಕೊಡವ ಭಾಷೆಯಲ್ಲೂ ಹಾಡು ಗಮನ ಸೆಳೆಯಿತು. ಹಾಡಿಗೆ ಹಾಗೂ ನಡು ನಡುವೆ ಸ್ಥಳೀಯ ಕಲಾತಂಡಗಳಿಂದ ನೃತ್ಯ ಪ್ರದರ್ಶನ ಮತ್ತಷ್ಟು ಮೆರುಗು ನೀಡಿತ್ತು.

ಕೊಡಗಿನ ಸಂಸ್ಕøತಿ, ಪರಿಸರವನ್ನು ಪ್ರತಿಬಿಂಬಿಸಿದ ಹಳೆಯ ಚಿತ್ರಗಳ ಗೀತೆಯನ್ನು ಇಲ್ಲಿ ಬಳಸಲಾಗಿತ್ತು.

ಬೆಳದಿಂಗಳಾಗಿ ಬಾ... ನೂರೊಂದು ನೆನಪು..., ಕೊಡಗಿನ ಕಾವೇರಿ... ವಿರಹಾ ನೂರು ನೂರು ತರಹ..., ಮಡಿಕೇರಿ ಸಿಪಾಯಿ... ಮಾಮರವೆಲ್ಲೋ... ಆರಾಧಿಸುವೆ ಮದನಾರಿ..., ಮತ್ತಿತರ ಹಾಡುಗಳು ಕೊಡವ ಭಾಷೆಯಲ್ಲಿ ಪಚ್ಚೆರಂಗ್‍ರ ಪೂಂದಳಿ... ಬಾಕೆ ಮನೆಲ್ ಬಾಳಿಬದ್‍ಕ್, ಕ್ರೋಡಮಲೆರ ಯಾಲಮಾಲೆಯೊ... ಹಾಡುಗಳು ಕೇಳುಗರ ಮನ ತಣಿಸಿತು. ಪ್ರೇಕ್ಷಕರು ಹಾಡು ಗುನುಗುನಿಸುತ್ತಾ ಸಂಗೀತದ ಮುದ ಅನುಭವಿಸಿದರು. ಕೂಡು ಮಂಗಳೂರಿನ ಕೆ.ಇ.ಎಸ್. ವಿದ್ಯಾಸಂಸ್ಥೆ, ಕುಶಾಲನಗರದ ಕಾವೇರಿ ಕಲಾಪರಿಷತ್, ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್, ಸುಂಟಿಕೊಪ್ಪ ಸ್ವಸ್ಥದ ವಿಶೇಷ ಮಕ್ಕಳು, ಭಾಗಮಂಡಲದ ಅಭಿನಯ ಕಲಾಮಿಲನ ಚಾರಿಟೇಬಲ್ ಟ್ರಸ್ಟ್, ಕೂಡಿಗೆ ಸೈನಿಕ ಶಾಲೆ, ಸೋಮವಾರಪೇಟೆಯ ವಂಶಿಕಲಾ ಶಾಲೆ, ಕುಶಾಲನಗರದ ಡ್ರೀಮ್ ಡ್ಯಾನ್ಸ್ ಗ್ರೂಪ್ಸ್, ಮಂಜು ಭಾರ್ಗವಿ ತಂಡ, ಮಡಿಕೇರಿಯ ನಾಟ್ಯನಿಕೇತನ ತಂಡದಿಂದ ನೃತ್ಯ ಪ್ರದರ್ಶನ ಮೂಡಿಬಂತು. ದೂರದರ್ಶನದ ಹಿರಿಯ ಮುಖ್ಯಸ್ಥ ಮಹೇಶ್ ಜೋಷಿ ಕುಪ್ಯಚೇಲೆ ಧರಿಸಿ, ಪರದಂಡ ಕಾವೇರಮ್ಮ ಸಂಗಡಿಗರೊಂದಿಗೆ ಕೊಡಗಿನ ಕಾವೇರಿ ಹಾಡು ಹಾಡಿದರೆ, ಆಕಾಶವಾಣಿಯ ನಿರ್ದೇಶಕ ರಾಘವೇಂದ್ರ ಆರಾಧಿಸುವೆ ಮದನಾರಿ ಹಾಡಿ ನೊಂದಿಗೆ ಗಮನ ಸೆಳೆದರು. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಸಚಿವ ಯಂ.ಸಿ. ನಾಣಯ್ಯ, ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ತೀತಮಾಡ ಅರ್ಜುನ್ ದೇವಯ್ಯ ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಿದರು.

ದೂರದರ್ಶನದ ಕಲಾವಿದರ ಸಂಗೀತ ಮುದ ನೀಡಿತು. ದೂರದರ್ಶನದ ಸಾರ್ತವಳ್ಳಿ ನಾರಾಯಣ ಸ್ವಾಮಿ ಹಾಗೂ ಅಂಜಪರವಂಡ ಬೊಳ್ಳಮ್ಮ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಸ್ಪಂದನ ದೊರೆತ ಕುರಿತು ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಹರ್ಷ ವ್ಯಕ್ತಪಡಿಸಿದರು.

-ಶಶಿ.