ಕುಶಾಲನಗರ, ಮಾ, 6 : ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ ವಿಲೇವಾರಿ ಮಾಡವಲ್ಲಿ ಪಂಚಾಯ್ತಿ ವಿಫಲವಾಗಿದೆ ಎಂದು ಆರೋಪಿಸಿ ಟ್ರಾಕ್ಟರ್ನಲ್ಲಿ ಕಸ, ತ್ಯಾಜ್ಯ ತುಂಬಿಸಿ ಪಂಚಾಯ್ತಿ ಕಚೇರಿ ಮುಂಭಾಗ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಮುಳ್ಳುಸೋಗೆ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ಕಳೆದ 3 ತಿಂಗಳಿನಿಂದ ವಿಲೇವಾರಿ ಮಾಡುವಲ್ಲಿ ಪಂಚಾಯ್ತಿ ವಿಫಲವಾಗಿದೆ. ಸೂಕ್ತ ಸ್ಥಳಾವಕಾಶ ಕೊರತೆಯ ನೆಪವೊಡ್ಡಿ ಕಸವನ್ನು ವಿಲೇವಾರಿ ಮಾಡಲು ಮೀನಾ ಮೇಷ ಎಣಿಸುತ್ತಿದೆ ಎಂದು ಸ್ಥಳೀಯ ಯುವಕ ಸಂಘದ ಪ್ರಮುಖರು ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಇಲಾಖೆ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು. ಪಂಚಾಯ್ತಿಯಲ್ಲಿ ಜನಪ್ರತಿನಿಧಿಗಳ ನಡುವೆ ಒಮ್ಮತದ ಕೊರತೆಯಿಂದಾಗಿ ಜನತೆ ಸಂಕಷ್ಟ ಅನುಭವಿಸು ವಂತಾಗಿದೆ ಎಂದು ಆರೋಪಿಸಿದ ಯುವಕ ಸಂಘದ ಪ್ರಮುಖರಾದ ಮಣಿ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಸದಸ್ಯರಾದ ಎಂ.ಎಸ್. ಶಿವಾನಂದ ಮಾತನಾಡಿ, ಪಂಚಾಯ್ತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ ವಿಲೇವಾರಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಲು ಒತ್ತಾಯಿಸಿದರು. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಕುಂದುಕೊರತೆಗಳ ಸಭೆಯಲ್ಲಿಯೂ ಈ ಬಗ್ಗೆ ಪ್ರಸ್ತಾಪಿಸಲಾಗಿದ್ದರೂ ಕೂಡ ಕಂದಾಯ ಇಲಾಖೆಯವರು ಇದುವರೆಗೆ ಸೂಕ್ತ ಕ್ರಮಕೈಗೊಂಡಿಲ್ಲ. ಈ ಹಿಂದೆ ಗೊಂದಿಬಸವನ ಹಳ್ಳಿಯಲ್ಲಿ ಕಸ ವಿಲೇವಾರಿ ಮಾಡುತ್ತಿದ್ದ ಕೋರೆ ಜಾಗವನ್ನೇ ಕಸ ವಿಲೇವಾರಿ ಮಾಡಲು ಅವಕಾಶ ಕಲ್ಪಿಸಬೇಕೆಂದು ಅವರು ಕೋರಿದರು.
ಪಂಚಾಯ್ತಿ ಉಪಾಧ್ಯಕ್ಷ ತಾರಾನಾಥ್ ಮಾತನಾಡಿ, ಪಂಚಾಯ್ತಿ ವ್ಯಾಪ್ತಿಯಲ್ಲಿ ಇರುವ ನೂರಾರು ಎಕರೆ ಪೈಸಾರಿ ಜಾಗದಲ್ಲಿ ಕಸ ವಿಲೇವಾರಿಗೆ ಸ್ಥಳ ಗುರುತಿಸಿ ಒದಗಿಸಬೇಕಿದೆ ಎಂದರು. ಈ ಸಂದರ್ಭ ಗ್ರಾಮಸ್ಥರಾದ ನಿಡ್ಯಮಲೆ ದಿನೇಶ್, ಅನುದೀಪ್ ಇದ್ದರು.