ಭೂತ್ ಜಲೋಕಿಯಾ ಎನ್ನುವ ನಾಗಾಲೇಂಡ್ ಮೂಲದ ಮೆಣಸಿನಕಾಯಿಯು ವಿಶ್ವದಲ್ಲಿಯೇ ಅತಿಯಾದ ಖಾರದ ಮೆಣಸು ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಸಾಂಪ್ರದಾಯಕ ಗಾಂಧಾರಿ ಮೆಣಸು ಸ್ಕೊವೈಲ್ ಎನ್ನುವ ಖಾರ ಅಳೆಯುವ ಮಾಪಕದಲ್ಲಿ 2500 ಮಾನಗಳನ್ನು ಗಳಿಸಿದರೆ ಭೂತ್ ಜಲೋಕಿಯಾ ಎನ್ನುವ ಮೆಣಸು ಇದರ ಸುಮಾರು 400 ಪಟ್ಟು ಎಂದರೆ ಸುಮಾರು ಹತ್ತು ಲಕ್ಷಗಳಿಗೂ ಹೆಚ್ಚು ಸ್ಕೊವೈಲ್ ಖಾರಮಾನಗಳನ್ನು ಹೊಂದಿದೆ. ಚೆನ್ನಾಗಿ ಬೆಳೆದ ಹಣ್ಣಿನಿಂದ ತೆಗೆದ ಇದರ ಬೀಜಗಳನ್ನು ಮೆದುವಾದ ಮಣ್ಣಿನಲ್ಲಿ ಹರಡಿದರೆ, ಸುಮಾರು ಒಂದು ತಿಂಗಳ ಅನಂತರ ಸಣ್ಣ ಸಸಿಗಳು ಮೊಳೆಯುತ್ತವೆ. ಈ ಸಸಿಗಳನ್ನು ಸುಮಾರು ಅರ್ಧ ಅಡಿ ಆಳದ ಗುಂಡಿಗಳಲ್ಲಿ ಎರಡು ಅಡಿ ನಂತರದಲ್ಲಿ ನೆಡಬೇಕು. ಮೂರು ತಿಂಗಳ ಅನಂತರ ಈ ಸಸಿಗಳು ಎರಡು ಅಡಿ ಎತ್ತರದವರೆಗೆ ಬೆಳೆದು ಬಿಳಿಯ ಬಣ್ಣದ ಹೂವುಗಳನ್ನು ಬಿಡುತ್ತವೆ. ಅವು ಹಸಿರು ಬಣ್ಣದ ಕಾಯಿಗಳಾಗಿ ಬೆಳೆದು ಆನಂತರ ಹಳದಿ ಕೆಂಪು ಬಣ್ಣದ ಹಣ್ಣುಗಳಾಗಿ ತಿರುಗಿ, ನೋಡಲು ಅತ್ಯಂತ ಆಕರ್ಷಕವಾಗಿ ಕಾಣುತ್ತವೆ. ಕೇವಲ ಖಾರದಲ್ಲಿ ಮಾತ್ರವಲ್ಲ, ಕೆಂಪು ಬಣ್ಣದಲ್ಲಿಯೂ ಇವು ಅತ್ಯಂತ ಪ್ರಖರತೆಯನ್ನು ಹೊಂದಿರುತ್ತದೆ.

ಈ ಮೆಣಸಿನ ಕಾಯಿಯನ್ನು ತಿನ್ನುವದಕ್ಕಂತೂ ಸಾಧ್ಯವಿಲ್ಲವಾದರೂ ಮನೆಯ ಅಂಗಳದ ಬದಿಯಲ್ಲಿ ಅಲಂಕಾರಿಕವಾಗಿ ಬೆಳೆಯಬಹುದು. ಕೊಡಗಿನ ಅನೇಕ ಮನೆಗಳಲ್ಲಿ ಇವುಗಳನ್ನು ಹೂವಿನ ಗಿಡಗಳೊಂದಿಗೆ ಬೆಳೆಸುತ್ತಿದ್ದಾರೆ.

2009ರಲ್ಲಿ ಡಿಆರ್‍ಡಿಓದ ವಿಜ್ಞಾನಿಗಳು ಈ ಮೆಣಸನ್ನು ಹೇಂಡ್ ಗ್ರೆನೇಡ್‍ಗಳಾಗಿ ಬಳಸಿ ಉಗ್ರವಾದಿಗಳನ್ನು ಮಟ್ಟ ಹಾಕುವ ಯೋಜನೆಯನ್ನು ನಿರೂಪಿಸಿದ್ದರು. ಈ ಭೂತ್ ಜಲೋಕಿಯಾದ ಖಾರದ ಮೆಣಸಿನ ಹಣ್ಣುಗಳನ್ನು ಪೆಪ್ಪರ್ ಸ್ಪ್ರೇ ಆಗಿಯೂ ಬಳಸಿ ಒಂಟಿ ಮಹಿಳೆಯರು ಆತ್ಮರಕ್ಷಣೆ ಮಾಡಿಕೊಳ್ಳುವ ಯೋಜನೆಯೂ ಇದೆಯಂತೆ ಅಂತೆಯೇ ಗಲಭೆ ಪ್ರದೇಶಗಳಲ್ಲಿ ಜನರ ಗುಂಪುಗಳನ್ನು ತ್ವರಿತವಾಗಿ ಚದುರಿಸಲು ಈ ಮೆಣಸಿನ ಕಾಯಿಯ ಟೀಯರ್ ಗೇಸ್ ಉತ್ಪಾದಿಸುವ ಚಿಂತನೆಯೂ ನಡೆದಿದೆಯಂತೆ ಅದೇನೇ ಇದ್ದರೂ ಕೊಡಗಿನ ಮಣ್ಣಿಗೆ ಅತಿ ಸೂಕ್ತವಾದ, ಚೆನ್ನಾಗಿ ಸುರುಕಾಗಿ ಬೆಳೆಯುವ ಈ ಭೂತ್ ಜಲೋಕಿಯಾ ಮೆಣಸಿನ ಕಾಯಿಯನ್ನು ಹೂಗಿಡದಂತೆಯೇ ಬೆಳೆಸಿದಾಗ ನೋಡುಗರ ಕಣ್ಣಿಗೆ ಹಬ್ಬವಾಗುವದಂತೂ ನಿಜ.

-ಕಿಗ್ಗಾಲು ಎಸ್. ಗಿರೀಶ್,

ಮೂರ್ನಾಡು.