*ಗೋಣಿಕೊಪ್ಪಲು, ಮಾ. 6: ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ನಿರ್ವಹಿಸುವ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದನೆನ್ನಲಾದ ವ್ಯಕ್ತಿಯನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ. ಚೆನ್ನಂಗೊಲ್ಲಿ ನಿವಾಸಿ ಅಪ್ಪಿ ಅನುಕುಮಾರ್ (30) ಆರೋಪಿಯಾಗಿದ್ದಾನೆ. ಜೋಡುಬೀಟಿ ನಿವಾಸಿಯಾಗಿರುವ ಯುವತಿ ಅತ್ಯಾಚಾರಕ್ಕೆ ಒಳಗಾದವಳು. ಫೆ. 21ರ ಸಂಜೆ 6.15. ತಿತಿಮತಿಯಲ್ಲಿರುವ ಸ್ನೇಹಿತೆಯ ಹುಟ್ಟುಹಬ್ಬ ಆಚರಣೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾಗ ಪೆಟ್ರೋಲ್ ತುಂಬಿಸಲು ಕಾರಿನಲ್ಲಿ ಬಂದು ಅನುಕುಮಾರ್ ತಿತಿಮತಿಗೆ ಆಕೆಯನ್ನು ಕರೆದೊಯ್ಯುವದಾಗಿ ನಂಬಿಸಿದ್ದ. ತಿತಿಮತಿ ಭದ್ರಗೋಳ ಚರ್ಚ್ ಸಮೀಪ ತಲಪುತ್ತಿದ್ದಂತೆ ಮುಖ್ಯ ರಸ್ತೆಯಲ್ಲಿ ಬಿಳಿಯ ಬಣ್ಣದ ‘800’ ಕಾರಿನಲ್ಲಿ ಬಲತ್ಕಾರವಾಗಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ನಂತರ ಪಂಚವಳ್ಳಿಯ ಲಾಡ್ಜ್‍ವೊಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿ ಮರುದಿನ ಬೆಳಗ್ಗೆ 7 ಗಂಟೆಗೆ ಕೆಲಸ ನಿರ್ವಹಿಸುವ ಪೆಟ್ರೋಲ್ ಬಂಕ್‍ಗೆ ಕರೆತಂದು ಆಕೆಯನ್ನು ಬಿಟ್ಟಿದ್ದಾನೆ ಎಂದೂ ದೂರಲಾಗಿದೆ. ಅಲ್ಲದೆ ಮದುವೆಯಾಗುವದಾಗಿ ನಂಬಿಸಿದ್ದಾನೆ ಎನ್ನಲಾಗಿದೆ. ಆದರೆ ಘಟನೆ ಬಳಿಕ ಮದುವೆಯಾಗಲು ಮುಂದಾಗದ ಹಿನ್ನೆಲೆ ಈಕೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಠಾಣಾಧಿಕಾರಿ ಜಯರಾಮ್ ದೂರು ದಾಖಲಿಸಿಕೊಂಡಿದ್ದು, ಪೊಲೀಸ್ ಉಪ ಅಧೀಕ್ಷಕ ನಾಗಪ್ಪ ಅವರು ತನಿಖೆ ಕೈಗೊಂಡಿದ್ದಾರೆ. ಎನ್.ಎನ್.ದಿನೇಶ್