ವೀರಾಜಪೇಟೆ,ಮಾ.5: ಕೇರಳದ ಶಾಲೆಯೊಂದರಿಂದ ಕೊಡಗಿನ ಪ್ರವಾಸ ತಾಣಗಳ ವೀಕ್ಷಣೆಗೆ ವಿದ್ಯಾರ್ಥಿ ನಿಯರನ್ನು ತುಂಬಿಸಿಕೊಂಡು ಬರುತ್ತಿದ್ದ ಕೊಡಗಿನ ಖಾಸಗಿ ಬಸ್ಸು ಇಲ್ಲಿನ ಪೆರುಂಬಾಡಿ ಬಳಿ ಉರುಳಿ ಬಿದ್ದ ಪರಿಣಾಮವಾಗಿ 43 ವಿದ್ಯಾರ್ಥಿಗಳು ಗಾಯಗೊಂಡು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೇರಳಕ್ಕೆ ಹಿಂದಿರುಗಿದ್ದಾರೆ.
ಗಾಯಗೊಂಡ ವಿದ್ಯಾರ್ಥಿಗಳ ಪೈಕಿ ಫಾತಿಮಾ, ಅನುಶ್ರೀ, ಅಹಿಲಾ, ಫರ್ವಾನ್, ಅಫೀದ್, ಸಹರಾಬಾನು, ನೀದಾ, ಶರೀನ್ ಹಾಗೂ ಗಂಭೀರ ಸ್ವರೂಪದ ಗಾಯಗೊಂಡ ಶ್ರೇಯಾಸ್ ತುರ್ತು ಚಿಕಿತ್ಸೆ ಪಡೆದು ಇಂದು ಕೇರಳಕ್ಕೆ ಮರಳಿ ಅಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದಂತೆ 34 ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯ ಗಳಾಗಿದ್ದು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ತಿಳಿಸಿದ್ದಾರೆ.
ಕೊಡಗಿನ ಪ್ರವಾಸಕ್ಕಾಗಿ ಕೇರಳದ ಇರಿಟ್ಟಿಯ ಉಳಿಲ್ ಎಂಬ ಗ್ರಾಮದ ಪ್ರೌಢ ಶಾಲೆಯ 68 ವಿದ್ಯಾರ್ಥಿಗಳು ವೀರಾಜಪೇಟೆ ಗಡಿ ಭಾಗವಾದ ಮಾಕುಟ್ಟದವರೆಗು ಕೇರಳದ ಖಾಸಗಿ ಬಸ್ಸಿನಲ್ಲಿ ಬಂದು ನಂತರ ವೀರಾಜಪೇಟೆ ಮಾರ್ಗವಾಗಿ ಪ್ರವಾಸಿ ತಾಣಕ್ಕೆ ತೆರಳಲು ಕುಶಾಲನಗರದ ಶ್ರೀ ರಾಘವೇಂದ್ರ ಟ್ರಾವೆಲ್ಸ್ (ಕೆ.ಎ.12 ಬಿ.4272) ಬಸ್ನಲ್ಲಿ ಬರುತಿದ್ದ ಸಂದರ್ಭ ಪೆರುಂಬಾಡಿ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಮಗುಚಿಕೊಂಡಾಗ ಬಸ್ನಲ್ಲಿದ್ದ 68 ವಿದ್ಯಾರ್ಥಿನಿಯರಲ್ಲಿ 43 ವಿದ್ಯಾರ್ಥಿನಿಯರಿಗೆ ಗಾಯಗಳಾಗಿದ್ದು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕೆಲವು ವಿದ್ಯಾರ್ಥಿನಿಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೇರಳದ ಇರಿಟ್ಟಿ ಹಾಗೂ ಇತರ ಪ್ರಮುಖ ಆಸ್ಪತ್ರೆಗೆ ಸಾಗಿಸಲಾಗಿದೆ ಹಾಗೂ ಬಸ್ಸು ಚಾಲಕ ಅಬ್ದುಲ್ ಖಲೀಲ್ನ ಬಲ ಭುಜದ ಮೂಳೆ ಮುರಿದಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಕುಮಾರ್ ಆರಾಧ್ಯ ತಿಳಿಸಿದ್ದಾರೆ.
ಗಂಭೀರವಾಗಿ ಗಾಯ ಗೊಂಡಿರುವ ಬಸ್ ಚಾಲಕ ಅಬ್ದುಲ್ ಖಲೀಲ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಬಸ್ಸ್ನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಬೆಳಿಗ್ಗೆಯಿಂದಲೆ ಸುದ್ಧಿ ತಿಳಿದ ಕೊಡಗು ಕೇರಳ ಗಡಿ ಭಾಗ ಹಾಗೂ ವೀರಾಜಪೇಟೆಯ ಅನೇಕ ಮಂದಿ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರ ಆಸ್ಪತ್ರೆಯ ಬಳಿ ಸೇರಿದ್ದರು.
ಅಪಘಾತಗೊಂಡ ಬಸ್ನ ಹಿಂದೆ ವಿದ್ಯಾರ್ಥಿನಿಯರ ಪ್ರವಾಸದ ಇನ್ನು ಎರಡು ಪ್ರವಾಸಿ ಬಸ್ಸುಗಳಿದ್ದು ಕೇರಳದಿಂದ ಒಟ್ಟು 206 ವಿದ್ಯಾರ್ಥಿನಿಯರು
ಮೂರು ಬಸ್ಸುಗಳಲ್ಲಿ ಕೊಡಗಿನ ಪ್ರವಾಸಿ ತಾಣದ ವೀಕ್ಷಣೆಗೆ ಪ್ರವಾಸ ಕೈಗೊಂಡಿದ್ದರು.