ಮಡಿಕೇರಿ, ಮಾ. 6: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರಾಗಿ ಕುಟುಂಬಸ್ಥರನ್ನು ಪರಿಗಣಿಸುವಂತೆ ಗಣಪತಿ ಅವರ ಕುಟುಂಬಸ್ಥರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ತಾ. 7ರಂದು (ಇಂದು) ನಡೆಯಲಿದೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಕೋರಿ ಗಣಪತಿ ಪುತ್ರ ನೇಹಾಲ್ ಗಣಪತಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಸರಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಆದರೆ ತನಿಖೆ ನಡೆಯುತ್ತಿದ್ದ ವೇಳೆ ದೂರುದಾರ ನೇಹಾಲ್ ಗಣಪತಿ ತನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿರುವ ಕಾರಣ ನೀಡಿ ಹಿಂದೆ ಸರಿದಿದ್ದರು. ಈ ಹಿನ್ನೆಲೆಯಲ್ಲಿ ಗಣಪತಿ ಅವರ ತಂದೆ ಕುಶಾಲಪ್ಪ, ತಾಯಿ ಜಾಜಿ, ಸಹೋದರ ಮಾಚಯ್ಯ, ಸಹೋದರಿ ಸಬಿತ ಅವರುಗಳು ತಮ್ಮನ್ನು ದೂರು ಅರ್ಜಿದಾರರಾಗಿ ಪರಿಗಣಿಸಬೇಕೆಂದು ಕೋರಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಈ ಸಂಬಂಧ ಇಂದು ವಿಚಾರಣೆ ಹಾಗೂ ನ್ಯಾಯಾಲಯದ ನಿರ್ಧಾರ ಪ್ರಕಟಗೊಳ್ಳಬೇಕಿತ್ತು. ಗಣಪತಿ ಸಹೋದರ ಮಾಚಯ್ಯ ವಕೀಲರೊಂದಿಗೆ ಹಾಜರಾಗಿ ಕಾಲಾವಕಾಶ ಕೋರಿಕೊಂಡ ಮೇರೆಗೆ ನ್ಯಾಯಾಧೀಶರಾದ ಅನ್ನಪೂರ್ಣೇಶ್ವರಿ ಅವರು ವಿಚಾರಣೆಯನ್ನು ತಾ. 7ಕ್ಕೆ ಮುಂದೂಡಿದ್ದಾರೆ. ತಾ. 7ರಂದು (ಇಂದು) ಕುಟುಂಬಸ್ಥರನ್ನು ದೂರುದಾರರಾಗಿ ಪರಿಗಣಿಸಬೇಕೇ ಬೇಡವೇ ಎಂಬ ಬಗ್ಗೆ ನಿರ್ಧಾರ ಹೊರಬೀಳಲಿದೆ.
ಈ ನಡುವೆ ತನಿಖೆ ನಡೆಸಿದ ಸಿಐಡಿ ತಂಡ ಗಣಪತಿ ಅವರದ್ದು ಆತ್ಮಹತ್ಯೆ ಎಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದೆ. ಆದರೆ ಗಣಪತಿ ತಂದೆ ಕುಶಾಲಪ್ಪ ಹಾಗೂ ಸಹೋದರ ಮಾಚಯ್ಯ ಸಿಐಡಿ ತನಿಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ತನಿಖೆಯನ್ನು ಸಿಬಿಐ ವಶಕ್ಕೊಪ್ಪಿಸುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.