ಒಡೆಯನಪುರ, ಮಾ 6: ಏಪ್ರಿಲ್ 1 ಕ್ಕೆ ತುಮಕೂರು ಸಿದ್ದಗಂಗಾ ಮಠಾಧೀಶ ಡಾ. ಶಿವಕುಮಾರಸ್ವಾಮೀಜಿ ಅವರಿಗೆ 110 ವರ್ಷ ತುಂಬುವ ಹಿನ್ನೆಲೆಯಲ್ಲಿ, ಅವರ 110ನೇ ಜನ್ಮದಿನೋತ್ಸವದ ಅಂಗವಾಗಿ ರಾಜ್ಯದ 12 ಜಿಲ್ಲೆಗಳಲ್ಲಿ ಶ್ರೀಗಳ ವಿವಿಧ ಭಾವಚಿತ್ರಗಳನ್ನೊಳಗೊಂಡು ಸಿಂಗರಿಸಿದ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಶೋಭಾಯಾತ್ರೆ ಕಾರ್ಯಕ್ರಮ 1 ತಿಂಗಳ ಮುಂಚಿತವಾಗಿ ನಡೆಯಲಿರುವ ಹಿನ್ನೆಲೆಯಲ್ಲಿ ಶ್ರೀಗಳ ಭಾವಚಿತ್ರದ ಶೋಭಾಯಾತ್ರೆ ಕಾರ್ಯಕ್ರಮ ತುಮಕೂರು, ಹಾಸನ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಮೂಲಕ ಸಂಚರಿಸಿ ಏ.1 ರಂದು ತುಮಕೂರಿಗೆ ಮರಳಲಿದೆ. ಈ ರಥದ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಅಂದು ಶ್ರೀಗಳ ಜನ್ಮದಿನೋತ್ಸವವನ್ನು ಆಚರಿಸಲಿರುವರು.
ಶೋಭಾಯಾತ್ರೆ ವಾಹನ ಇಂದು ಮಧ್ಯಾಹ್ನ ಕೊಡಗು-ಹಾಸನ ಗಡಿ ಭಾಗದಲ್ಲಿರುವ ಶನಿವಾರಸಂತೆಯನ್ನು ಪ್ರವೇಶಿಸಿತು, ಹಾಸನ ಜಿಲ್ಲೆಯ ಯಸಳೂರು ಮೂಲಕವಾಗಿ ಬಂದ ರಥಯಾತ್ರೆ
(ಮೊದಲ ಪುಟದಿಂದ) ಶನಿವಾರಸಂತೆ ಪಟ್ಟಣ ಪ್ರವೇಶಿಸಿದಂತೆ ಸ್ಥಳೀಯರು ವಾದ್ಯಗೋಷ್ಠಿಯೊಂದಿಗೆ ಸ್ವಾಗತಿಸಿದರು. ನಂತರ ಗುಡುಗಳಲೆ ಜಂಕ್ಷನ್ನಲ್ಲಿ ಶೋಭಾಯಾತ್ರೆ ವಾಹನವನ್ನು ಕೊಡ್ಲಿಪೇಟೆ ಕಲ್ಲುಮಠದ ಮಹಂತ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವಸ್ವಾಮೀಜಿ ಹಾಗೂ ವಿವಿಧ ಮಠಗಳ ಮಠಾಧೀಶರು, ವೀರಶೈವ ಸಮಾಜದ ಪ್ರಮುಖರು ಹಾಗೂ ಸಾರ್ವಜನಿಕರು ಸ್ವಾಗತಿಸಿದರು, ನಂತರ ಶೋಭಾಯಾತ್ರೆ ವಾಹನ ಕುಶಾಲನಗರ ಕಡೆಗೆ ಸಂಚರಿಸಿತು. ರಾತ್ರಿ ತೊರೆನೂರು ಮಠದಲ್ಲಿ ತಂಗಲಿರುವ ಸಿದ್ಧಗಂಗಾ ರಥವು ತಾ. 7ರಂದು ಶಿರಂಗಾಲ, ಕೂಡಿಗೆ ಮುಖಾಂತರ ಕುಶಾಲನಗರದೆಡೆಗೆ ಬೆಳಿಗ್ಗೆ 10 ಗಂಟೆಗೆ ತೆರಳಲಿದೆ. ಮುಂದೆ ಕೊಪ್ಪ ಮಾರ್ಗವಾಗಿ ಮೈಸೂರು ಜಿಲ್ಲೆಯನ್ನು ಪ್ರವೇಶಿಸಲಿದೆ.