ಮಡಿಕೇರಿ, ಮಾ. 5: ಜೀವನದಲ್ಲಿ ಗುರಿ ಸಾಧಿಸಲು ಮೊದಲು ಪುರುಷಾರ್ಥ ಅವಶ್ಯ. ಸ್ವಪ್ರಯತ್ನ ಸಂಪೂರ್ಣವಾದಲ್ಲಿ ದೈವಾರ್ಥ ತನ್ನಿಂತಾನೇ ಒದಗಿಬರುತ್ತದೆ ಎಂದು ಸೋಹಂ ಧ್ಯಾನ ಯೋಗ ಮಾರ್ಗದರ್ಶಕ ಶ್ರೀ ಬಿ.ಕೆ. ಸುಬ್ಬಯ್ಯ ಹೇಳಿದರು.ಅವರು ‘ಶಕ್ತಿ'ಯ ವಜ್ರ ಮಹೋತ್ಸವ ಸಂದರ್ಭ ಲೇಖಕರ, ಬರಹಗಾರರ ಸಭೆ ಉದ್ಘಾಟಿಸಿ ಮಾತನಾಡಿದರು. ‘ಶಕ್ತಿ'ಯ ಸ್ಥಾಪಕ ಸಂಪಾದಕ ಬಿ.ಎಸ್. ಗೋಪಾಲಕೃಷ್ಣ ಅವರ ಶ್ರಮ, ಸದೃಢತೆಯನ್ನು ಅದ್ಭುತ ಎಂದು ವಿಶ್ಲೇಷಿಸಿದ ಅವರು ‘ಶಕ್ತಿ'ಯ ಕಥೆ ಪುರುಷಾರ್ಥದಿಂದ ದೈವಾರ್ಥ ಸಾಧನೆ ಮಾಡಿದಂತಾಗಿದೆ ಎಂದರು. ‘ಶಕ್ತಿ' ಬಳಗದ ಒಗ್ಗಟ್ಟು ಮತ್ತು ನಿಸ್ವಾರ್ಥತೆ ಗಮನಾರ್ಹ ಎಂದರು. ‘ಶಕ್ತಿ' ಮಹಾಶಕ್ತಿಯಾಗಿ ಬೆಳಗಲಿ ಎಂದು ಶುಭ ಹಾರೈಸಿದರು.ಇದೇ ಸಂದರ್ಭ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಉಪನ್ಯಾಸಕಿ ಡಾ. ರೇಖಾ ವಸಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಜನರಿಗೆ ಅನ್ಯಾಯವಾದಾಗ, ಸಾರ್ವಜನಿಕ ಸಮಸ್ಯೆಗಳಾದಾಗ ಜನರ ಧ್ವನಿಯಾಗಿ ‘ಶಕ್ತಿ' ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕವಾಗಿ ‘ಶಕ್ತಿ'ಯ ಜವಾಬ್ದಾರಿ ಮಹತ್ವದ್ದಾಗಿದ್ದು, ಇಂದು ಜನತೆ

(ಮೊದಲ ಪುಟದಿಂದ) ಸ್ವಾರ್ಥದ ಕಡೆ ತೆರಳುತ್ತಿದ್ದಾರೆ. ನಮ್ಮ ಸಂಸ್ಕøತಿ, ಪರಂಪರೆಯನ್ನು ಉಳಿಸಿ ಜನ ನೆಮ್ಮದಿಯಿಂದ ಬದುಕಬೇಕಾದರೆ ಬರಹಗಾರರ ಬರಹಗಳು ಸರಳವಾಗಿರಬೇಕು ಮತ್ತು ತೀಕ್ಷ್ಣವಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿ ಜನತೆ ‘ಶಕ್ತಿ'ಯ ಮೇಲೆ ಅಪಾರ ನಂಬಿಕೆಯಿಟ್ಟಿದ್ದಾರೆ. ‘ಶಕ್ತಿ' ಬಳಗವೂ ಅದನ್ನು ಉಳಿಸಿದೆ. ಪತ್ರಿಕೆಯನ್ನು ಎಲ್ಲರೂಕೊಂಡು ಓದಬೇಕೆಂದು ಹೇಳಿದರು. ಪ್ರಾಸ್ತಾವಿಕವಾಗಿ ‘ಶಕ್ತಿ' ಪ್ರಧಾನ ಸಂಪಾದಕ ಜಿ. ರಾಜೇಂದ್ರ ಮಾತನಾಡಿ, ಭಾವನೆಗಳು ಮೂಡಿದಾಗ ಕವನಗಳನ್ನು ಬರೆಯಲು ಸಾಧ್ಯ. ಸಣ್ಣ ಕಥೆಗಳು ಇಂದು ಮೂಡಿಬರುತ್ತಿಲ್ಲ ಎಂದು ವಿಷಾದಿಸಿದ ಅವರು, ಕಥೆಗಳು ನೀರಸವಾಗಿ ಮುಗಿಯುವ ಬದಲು ಕುತೂಹಲಭರಿತವಾಗಿರಬೇಕು ಎಂದು ಹೇಳಿದರು.

ಇದೇ ಸಂದರ್ಭ ‘ಶಕ್ತಿ'ಯ 60ನೇ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ಸಾಹಿತ್ಯಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಸೋಹಂ ಧ್ಯಾನ ಯೋಗ ಬಳಗದ ನೀಲಮ್ಮಾಜಿ ಗಾಯನ ಹಾಡಿ ರಂಜಿಸಿದರೆ, ಸಾಹಿತಿ ನಾಗೇಶ್ ಕಾಲೂರು ‘ಶಕ್ತಿ' ಹುಟ್ಟುಹಬ್ಬ ಬಗೆಗಿನ ಸ್ವರಚಿತ ಕವನ ಓದಿದರು.

‘ಶಕ್ತಿ' ಸಂಪಾದಕ ಜಿ. ಚಿದ್ವಿಲಾಸ್ ಸ್ವಾಗತಿಸಿ, ಚಿರಂತನ್ ಪ್ರಾರ್ಥಿಸಿದರೆ, ವ್ಯವಸ್ಥಾಪಕಿ ಪ್ರಜ್ಞಾ ವಂದಿಸಿದರು. ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಕಾರ್ಯಕ್ರಮ ನಿರೂಪಿಸಿದರು.