ಮಾನ್ಯರೆ,

ನಮಗೆಲ್ಲರಿಗೂ ತಿಳಿದಿರುವಂತೆ ತಮಿಳುನಾಡಿನಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದಂತಹ ರಾಜಕೀಯ ಘಟನೆಗಳನ್ನು ಎಲ್ಲಾ ಮಾಧ್ಯಮಗಳ ಮೂಲಕ ಅವಲೋಕಿಸಿದಾಗ ಬುದ್ಧಿವಂತ, ವಿದ್ಯಾವಂತ, ಪ್ರಜ್ಞಾವಂತ ನಾಗರಿಕರಲ್ಲಿ ಮಾತ್ರವಲ್ಲ ಎಲ್ಲಾ ಸಾಮಾನ್ಯ ಪ್ರಜೆಗಳ ಮನಸ್ಸಿನಲ್ಲಿ ಭಯ ಮತ್ತು ದಿಗ್‍ಭ್ರಮೆ ಗೊಳಿಸುವದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ ಶಶಿಕಲಾ ನಟರಾಜನ್ ಎಂಬ ಸಾಮಾನ್ಯ ಮಹಿಳೆ ಪದವೀಧರೆಯಲ್ಲದೆ ಜನರಿಂದ ಆರಿಸಲ್ಪಟ್ಟ ಪ್ರತಿನಿಧಿಯೂ ಕೂಡಾ ಅಲ್ಲದ ಕೇವಲ ವಿಡೀಯೋ ಶಾಪ್ (ಅಂಗಡಿ) ಇಟ್ಟುಕೊಂಡು ತನ್ನ ಜೀವನ ಸಾಗಿಸುತ್ತಿದ್ದು, ಕಾಕತಾಳಿಯ ಎಂಬಂತೆ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ಜಯಲಲಿತಾ ಅವರ ಸಂಪರ್ಕಕ್ಕೆ ಬಂದು ಅವಳ ಮನಸ್ಸನ್ನು ತನ್ನ ಮಾತಿನ ಮೋಡಿಯ ಮೂಲಕ ಗೆದ್ದು ಮೆರೆದಂತ ಮಹಿಳೆ ಎಂಬದು ಜಗಜ್ಜಾಹೀರು ಆಗಿರುವ ವಿಷಯವಾಗಿರುತ್ತದೆ.

ಈ ಮೇಲೆ ಹೇಳಿದ ವಿಷಯದ ಜೊತೆಗೆ ಕಳೆದ ವಾರ ತಮಿಳುನಾಡಿನ ಮುಖ್ಯಮಂತ್ರಿಯ ಆಯ್ಕೆ ವಿಚಾರ ಬಂದಾಗ ಈ ಸಾಮಾನ್ಯ ಮಹಿಳೆ ತಮಿಳುನಾಡಿನ ಸುಮಾರು 119 ಶಾಸಕರನ್ನು ಗೋಲ್ಡನ್ ರೆಸಾರ್ಟ್‍ನಲ್ಲಿ ತನ್ನ ಹಿಡಿತದಿಂದ ಕೂಡಿಹಾಕಿ ತನ್ನ ಅಣತಿಯಂತೆ ನಡೆಸಿಕೊಂಡು ಚುನಾವಣೆಯಲ್ಲಿ ಮೂರು ಬಾರಿ ಜನರಿಂದ ತಿರಸ್ಕರಿಸಲ್ಪಟ್ಟು ಸೋತ ಪಳನಿಸ್ವಾಮಿಯವರನ್ನು ತಮಿಳುನಾಡಿನ ಮುಖ್ಯಮಂತ್ರಿಯ ಗದ್ದುಗೆಗೆ ಏರಿಸುವಲ್ಲಿ ಯಶಸ್ವಿ ಆಗಿ ತದನಂತರ ಜೈಲಿಗೆ ತೆರಳಿ ಸೆರೆಮನೆ ವಾಸಿಯಾದಳು. ಇದು ನಿಜಕ್ಕೂ ಪ್ರಜಾಪ್ರಭುತ್ವದ ಅಣಕ ಅಥವಾ ಪ್ರಜಾಪ್ರಭುತ್ವದ ಕಗ್ಗೊಲೆ ಎಂಬದರಲ್ಲಿ ಖಂಡಿತವಾಗಿಯೂ ಸಂದೇಹವೇ ಇಲ್ಲ. ಇನ್ನೂ ಹೆಚ್ಚಿನ ಆಶ್ಚರ್ಯಪಡುವಂತಹ ವಿಚಾರ ಏನೆಂದರೆ ಶಶಿಕಲಾ ಒಡ್ಡಿದ ಆಸೆ-ಆಮಿಷಗಳಿಗೆ ಜನರಿಂದ ಚುನಾಯಿಸಲ್ಪಟ್ಟಂತಹ ಶಾಸಕರು ಒಳಗಾಗಿ ಮಂಡಿಯೂರಿ ಅವಳ ಅಣತಿಯಂತೆ ನಡೆದುಕೊಂಡು ಪಳನಿಸ್ವಾಮಿಯವರು ಮುಖ್ಯಮಂತ್ರಿಯಾಗಿ ಆರಿಸಿ ಬಂದಿರುವದು ಅಸಹ್ಯಕರ ಭಾವನೆಯನ್ನು ಎಲ್ಲರಲ್ಲಿ ಮೂಡಿಸಿರುವದು ತುಂಬಾ ಆತಂಕದ ವಿಷಯ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನು ಮುಂದೆ ಎಲ್ಲಿಗೆ ಹೋಗಿ ತಲಪುತ್ತದೆ ಎಂಬದು ಹೆದರಿಕೆ, ಭಯ ಎಲ್ಲರಲ್ಲಿ ಮೂಡುವದರಲ್ಲಿ ಸಂಶಯವೇ ಇಲ್ಲ. ಭಾರತ ಪ್ರಪಂಚದಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೆಸರುವಾಸಿ ಆದರೂ 130 ಕೋಟಿ ಭಾರತೀಯರಾದ ನಮಗೆ ಈ ಹೊಲಸು ರಾಜಕೀಯ ತಲೆತಗ್ಗಿಸುವಂತೆ ಮಾಡಿದೆ.

- ಚೆಟ್ರುಮಾಡು ಎಸ್. ಭೀಮಯ್ಯ, ನಿವೃತ್ತ ಉಪನ್ಯಾಸಕರು, ನಲ್ಲೂರು.