ಮಾನ್ಯರೆ,

ಇನ್ನೇನು ಸದ್ಯದಲ್ಲಿಯೇ ನಮ್ಮ ರಾಜ್ಯದ ವಿಧಾನ ಸಭೆಯ ಚುನಾವಣೆ ಬರಲಿದೆ. ವಿವಿಧ ರಾಜಕೀಯ ಪಕ್ಷಗಳು ಅದಕ್ಕೆ ಈಗಿನಿಂದಲೇ ತಯಾರಿ ನಡೆಸಿವೆ. ಪತ್ರಿಕೆಗಳಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ರಾಜಕೀಯ ಪಕ್ಷಗಳ ನೇತಾರರ ನಾಟಕ ನಡೆದಿದೆ. ಪರಸ್ಪರ ವೈಯಕ್ತಿಕ ವಾಗ್ದಾಳಿ. ಕೆಲವೆಡೆ ಪಕ್ಷಗಳ ಕಾರ್ಯಕರ್ತರ ಹೊಡೆದಾಟ-ಬಡಿದಾಟದ ಮನರಂಜನೀಯ (!) ಕಾರ್ಯಕ್ರಮಗಳು. ಕಂಡೋ, ಕೇಳರಿಯದ ಭಾಷೆಯ ಪ್ರಹಾರ, ಮಹಾತ್ಮ ಗಾಂಧೀಜಿಯವರ ಶ್ರೇಷ್ಠ ಪದಗಳಾದ ‘ಸತ್ಯಮೇವ ಜಯತೇ’ ಎಂಬದೀಗ ಅಸತ್ಯಮೇವ ಜಯತೇ ಎಂದು ಬದಲಾಗಿದೆ. ಮಹಾತ್ಮಾಜಿಯವರ ಕಣ್ಣು, ಕಿವಿ ಮತ್ತು ಬಾಯಿ ಮುಚ್ಚಿ ಕುಳಿತಿರುವ ಮಂಗಗಳ ಚಿತ್ರ ಕೆಟ್ಟದನ್ನು ನೋಡ ಬೇಡ, ಕೆಟ್ಟದನ್ನು ಕೇಳ ಬೇಡ ಮತ್ತು ಕೆಟ್ಟದನ್ನು ಮಾತಾಡಬೇಡ ಎಂದಿರುವ ಕಾರಣ ರಾಜಕೀಯ ವ್ಯಕ್ತಿಗಳು ಮಾಡುತ್ತಿರುವ ಅನಾಚಾರ, ವ್ಯಭಿಚಾರಗಳನ್ನು ನೋಡ ಬೇಡ, ಅವರು ಹೇಳುವ ಸುಳ್ಳು ಮತ್ತು ಕಪೋಲ ಕಲ್ಪಿತ ಕತೆಗಳನ್ನು ಕೇಳಬೇಡ ಮತ್ತು ಇವುಗಳ ಬಗ್ಗೆ ಯಾರೊಂದಿಗೂ ಚರ್ಚಿಸಬೇಡ ಎನ್ನುವಂತಿದೆ. ಆ ಮಂಗಗಳ ಭಾವ. ಅದನ್ನೇ ಇಂದಿನ ರಾಜಕಾರಣಿಗಳು ಜನಸಾಮಾನ್ಯರ ಕಷ್ಟಗಳನ್ನು ನೋಡ ಬೇಡ, ಅವರ ದುಃಖ-ದುಮ್ಮಾನಗಳಿಗೆ ಕಿವಿಗೊಡಬೇಡ ಮತ್ತು ಮತಯಾಚನೆ ಬಿಟ್ಟು ಇನ್ನಾವದೇ ವಿಷಯದಲ್ಲಿ ಬಾಯಿ ತೆರೆಯಬೇಡ ಎಂದು ವ್ಯಾಖ್ಯಾನಿಸಿಕೊಂಡಿದ್ದರು ಸಹಾ ಚುನಾವಣೆಗೆ ಒಂದು ವರ್ಷ ಮೊದಲೇ ಭರವಸೆ ಮತ್ತು ಆಶ್ವಾಸನೆಗಳಿಗಷ್ಟೇ ಸೀಮಿತವಾಗಿದೆ ಅವರ ಬಾಯಿ.

ಮತದಾರ ಬಂಧುವೇ? ಸಾಧ್ಯವಾದರೆ ನೀನು ಸೆಣಬಿನಿಂದ ತಯಾರಿಸಿದ ಒಂದು ಗೋಣಿ ಚೀಲವನ್ನು ಇಂದಿನಿಂದಲೇ ಕೈಯಲ್ಲಿ ಹಿಡಿದುಕೋ. ಮಹಾಪೂರದಂತೆ ಹರಿದು ಬರುವ ರಾಜಕೀಯ ನೇತಾರರ ಭರವಸೆ, ಆಶ್ವಾಸನೆಗಳು ಸುಳ್ಳಿನಿಂದ ಕೂಡಿರುತ್ತದೆ. ಅದೇ ಚೀಲದಲ್ಲಿ ತುಂಬಿಕೋ, ಮತದಾನ ಮುಗಿಯುವ ಮೊದಲೇ ಅವುಗಳು ಚೀಲದಿಂದ ಸೋರಿ ಹೋಗಿ, ಚೀಲವೂ ಸಹ ಗುರುತು ಹತ್ತದಂತೆ ಕಿತ್ತು ಹೋಗಿರುತ್ತದೆ. ಅವರಿಗೆ ಚೆನ್ನಾಗಿ ಗೊತ್ತಿದೆ. ಕಿಸೆಗೊಂದು ಪುಡಿಗಾಸು ಮತ್ತು ಬಾಯಾರಿಕೆಯ ನೆಪದಲ್ಲಿ ಹೊಟ್ಟೆಗೊಂದಿಷ್ಟು ಸುರಾಪಾನ ಹಾಕಿಸಿದರೆ ಸಾಕು. ಅವರಿಗೆ ಮತ ಬೀಳುತ್ತದೆ ಎಂದು. ಮತದಾನದ ಮೊದಲು ನಿಮ್ಮ ಕಾಲು ಹಿಡಿದ ವ್ಯಕ್ತಿ, ಮತದಾನವಾದ ಬಳಿಕ ನಿಮ್ಮ ಮುಖ ನೋಡಿದರೆ ಸಿಂಡರಿಸಿಕೊಂಡು ನಿಮ್ಮ ಕಾಲರ್ ಹಿಡಿಯುತ್ತಾನೆ. ಈಗಿನಿಂದಲೇ ನೀನು ಎಚ್ಚರವಾಗಿರು. ಅವರು ನೀಡುವ ಭರವಸೆ, ಆಶ್ವಾಸನೆ, ಹಣ ಮತ್ತು ಹೆಂಡವನ್ನು ತಿರಸ್ಕರಿಸು, ನಾವು ಮಾಡುವ ಮತದಾನ ಗುಂಡಿಗಿಂತಲೂ ಚೂಪಾಗಿರಬೇಕು. ಅಭ್ಯರ್ಥಿಯ ಯೋಗ್ಯತೆಯನ್ನು ಪರಿಶೀಲಿಸಿ ಉತ್ತಮನಿಗೆ ಮತದಾನ ಮಾಡಿರಿ. ಯಾವದೇ ಆಮಿಷಕ್ಕೆ ಬಲಿ ಬೀಳಬೇಡಿ. ಮತದಾನದಿಂದ ಹಿಂದೆ ಸರಿಯಬೇಡಿ. ಮತದಾನ ಎಂಬದು ಸಂವಿಧಾನ ನಿಮಗೆ ನೀಡಿರುವ ಹಕ್ಕು. ಮತದಾನದ ಪ್ರಕ್ರಿಯೆ ಗುಪ್ತವಾಗಿ ನಡೆಯುವ ಕಾರಣ ನೀವು ಯಾರಿಗೂ ಹೆದರಬೇಕಿಲ್ಲ. ನೀವು ಆಯ್ಕೆ ಮಾಡುವ ವ್ಯಕ್ತಿಯೇ ನಮ್ಮ ಜನಪ್ರತಿನಿಧಿ. ಮತದಾನದ ಸಂದರ್ಭ ನೀವು ಎಚ್ಚರವಾಗಿದ್ದರೆ ಖಂಡಿತಾ ನಮಗೆ ಸುಭದ್ರವು ಜನಾನುರಾಗಿಯಾದ ಸರಕಾರದ ರಚನೆಯಾಗುತ್ತದೆ.

- ಮುಕ್ಕಾಟಿರ ಚೋಟು ಅಪ್ಪಯ್ಯ, ಪಾರಾಣೆ