ಮಾನ್ಯರೆ,

ಮಡಿಕೇರಿಯಲ್ಲಿ ನನಗೆ ಪರಿಚಯಸ್ಥರಾದ ಒಬ್ಬ ತಾಯಿ ತನ್ನ ಮಗಳನ್ನು ಶಾಲೆಗೆ ಬಿಡಲು ಸ್ಕೂಟರಿನಲ್ಲಿ ತೆರಳುತ್ತಿರುವಾಗ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿತು. ಅಪಘಾತದಿಂದ ತೀವ್ರ ಗಾಯಗೊಂಡು ಪ್ರಜ್ಞೆತಪ್ಪಿ ಚರಂಡಿಯಲ್ಲಿ ಬಿದ್ದಿದ್ದರು. ಅದೇ ಸಮಯಕ್ಕೆ ಹಲವಾರು ವಾಹನಗಳು ಅದೇ ರಸ್ತೆಯಲ್ಲಿ ಓಡಾಡಿದರೂ ಕೂಡಾ ಸ್ಪಂದಿಸಲಿಲ್ಲ. ಅಷ್ಟರಲ್ಲಿ ಸ್ಥಳೀಯ ಎಫ್.ಎಂ.ಸಿ. ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ತಕ್ಷಣ ಇದನ್ನು ಗಮನಿಸಿ ಧಾವಿಸಿ ಬಂದು ಗಾಯಾಳುಗಳ ನೆರವಿಗೆ ಕೈಜೋಡಿಸಿದರು. ಆಸ್ಪತ್ರೆಗೆ ಸಾಗಿಸುವ ಬಗ್ಗೆ ಹಲವಾರು ವಾಹನಗಳಿಗೆ ಕೈತೋರಿಸಿದರೂ ನಿಲ್ಲಿಸದೇ ಹೋದಾಗ, ಒಬ್ಬ ಆಟೋ ಚಾಲಕ ನಿಲ್ಲಿಸಿ, ಬಾಡಿಗೆಯನ್ನೂ ಸಹ ಪಡೆಯದೇ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲು ನೆರವಾದರು. ಚಿಕಿತ್ಸೆ ಕೊಡಿಸಿ ಪ್ರಾಣಾಪಾಯದಿಂದ ಪಾರು ಮಾಡಿದ ಹೆಗ್ಗಳಿಕೆ ಈ ವಿದ್ಯಾರ್ಥಿಗಳು ಹಾಗೂ ಆಟೋ ಚಾಲಕನಿಗೆ ಸಲ್ಲುತ್ತದೆ. ಅಲ್ಲದೇ ಗಾಯಾಳುಗಳ ವಸ್ತುಗಳನ್ನು ಕೂಡಾ ಜೋಪಾನ ಮಾಡುವಲ್ಲಿಯೂ ತಮ್ಮ ಪ್ರಾಮಾಣಿಕತೆ ಮೆರೆದಿದ್ದಾರೆ. ನಂತರ ಸದ್ರಿ ವಿದ್ಯಾರ್ಥಿಗಳು ಗಾಯಾಳುವಿನ ಮೊಬೈಲ್‍ನಿಂದ ಅವರ ಸ್ನೇಹಿತರಿಗೆ ಸಂದೇಶವನ್ನು ರವಾನೆ ಮಾಡಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿರುವದು ಶ್ಲಾಘನೀಯ. - ಕೆ.ಡಿ. ದಯಾನಂದ, ಮಡಿಕೇರಿ