ಮಡಿಕೇರಿ, ಮಾ.5 : ದುಬಾರೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪ್ರವಾಸಿಗರ ನಿಯಮ ಬಾಹಿರ ಚಟುವಟಿಕೆ ಮತ್ತು ಸಾವಿನ ಪ್ರಕರಣಗಳಿಗೆ ನಾವು ಹೊಣೆಗಾರರಲ್ಲ ವೆಂದು ರಿವರ್ ರ್ಯಾಫ್ಟಿಂಗ್ ಗೈಡ್‍ಗಳು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಎಂ.ರಮೇಶ್, ದುಬಾರೆಗೆ ಆಗಮಿಸುವ ಪ್ರವಾಸಿಗರು ಮದ್ಯಪಾನ ಮಾಡಿ, ತಮಗಿಚ್ಛೆ ಬಂದಂತೆ ವರ್ತಿಸಿ ಅಪಾಯಕ್ಕೆ ಒಳಗಾಗುತ್ತಿದ್ದಾರೆ. ಎಚ್ಚರಿಕೆಯಿಂದ ಇರುವಂತೆ ಗೈಡ್‍ಗಳಾದ ನಾವು ಸಲಹೆಯನ್ನು ನೀಡಿದರೆ ನಮ್ಮ ಮೇಲೆಯೇ ಪ್ರವಾಸಿಗರು ಧಾಳಿ ಮಾಡುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಬೋಟಿಂಗ್ ಮತ್ತು ರ್ಯಾಫ್ಟಿಂಗ್‍ನಿಂದ ಸಾವು ನೋವುಗಳು ಸಂಭವಿಸುತ್ತಿದೆ ಎನ್ನುವದು ಸತ್ಯಕ್ಕೆ ದೂರವಾದ ಆರೋಪವಾಗಿದ್ದು, ಅನಾಹುತಕ್ಕೆ ಒಳಗಾಗುವವರನ್ನು ಗೈಡ್‍ಗಳು ರಕ್ಷಿಸುವ ಕೆಲಸವನ್ನು ಮಾಡುತ್ತಿದ್ದಾರೆಯೇ ಹೊರತು ಯಾವದೇ ನಿರ್ಲಕ್ಷ್ಯ ವಹಿಸಿಲ್ಲವೆಂದು ಸ್ಪಷ್ಟಪಡಿಸಿದರು. ದುಬಾರೆಯಲ್ಲಿ 50 ಕ್ಕೂ ಅಧಿಕ ರ್ಯಾಫ್ಟ್ ಹಾಗೂ 4 ಬೋಟಿಂಗ್ ಮೆಷಿನ್ ಕಾರ್ಯ ನಿರ್ವಹಿಸುತ್ತಿದೆ. ಈ ಎಲ್ಲಾ ವ್ಯವಸ್ಥೆಗಳಿಗೆ 16 ಸಂಸ್ಥೆಗಳು ಲೈಸೆನ್ಸ್ ಪಡೆದಿದ್ದು, ಪ್ರತಿ ನಾಲ್ಕು ರ್ಯಾಫ್ಟಿಂಗ್‍ಗಳಿಗೆ 14 ಸಾವಿರ ರೂ. ಕಂದಾಯವನ್ನು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಗೆ ಪಾವತಿಸ ಲಾಗುತ್ತಿದೆ ಎಂದು ತಿಳಿಸಿದರು.
ದುಬಾರೆ ವ್ಯಾಪ್ತಿಯಲ್ಲಿ ಹೋಂ ಗಾಡ್ರ್ಸ್ ಹಾಗೂ ಪೊಲೀಸರ ಕಾವಲಿದ್ದರೂ ಕಣ್ತಪ್ಪಿಸಿ ನದಿಯಲ್ಲಿ ಈಜಲು ತೆರಳುವ ಪ್ರವಾಸಿಗರು ಮದ್ಯಪಾನ ಮಾಡಿ ಅಪಾಯವನ್ನು ತಂದೊಡ್ಡಿಕೊಳ್ಳುತ್ತಿದ್ದಾರೆ. ಗೈಡ್‍ಗಳೊಂದಿಗೆ ದರ್ಪದಿಂದ ವರ್ತಿಸುತ್ತಿದ್ದಾರೆಂದು ಎಂ.ಎಂ. ರಮೇಶ್ ಆರೋಪಿಸಿದರು. ಸುಮಾರು 70 ಮಂದಿ ರ್ಯಾಫ್ಟಿಂಗ್ ಗೈಡ್‍ಗಳು ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯ ಯಾವದೇ ಭಾಗದ ನದಿಗಳಲ್ಲಿ ಸಾವು ಸಂಭವಿಸಿದಲ್ಲಿ ಪೊಲೀಸರ ಕೋರಿಕೆ ಮೇರೆಗೆ ಸ್ಥಳಕ್ಕೆ ತೆರಳಿ ಶವವನ್ನು ಮೇಲೆತ್ತಲು ಸಹಕರಿಸು ತ್ತಿದ್ದಾರೆ. ರ್ಯಾಪ್ಟಿಂಗ್ ನೊಂದಿಗೆ ಸಾಮಾಜಿಕ ಕಳಕಳಿಯನ್ನು ಕೂಡ ಗೈಡ್‍ಗಳು ತೋರುತ್ತಿದ್ದು, ವಿನಾಕಾರಣ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚೆಗೆ ಇಬ್ಬರು ಕಾರ್ಮಿಕರು ಮೃತಪಟ್ಟ ಜಾಗಕ್ಕೂ ರ್ಯಾಪ್ಟಿಂಗ್ ಪ್ರದೇಶಕ್ಕು 1 ಕಿ.ಮೀ. ನಷ್ಟು ಅಂತರವಿದ್ದು, ಇದಕ್ಕೂ ತಮಗೂ ಯಾವದೇ ಸಂಬಂಧವಿಲ್ಲವೆಂದು ರಮೇಶ್ ಸ್ಪಷ್ಟಪಡಿಸಿದರು. 2013 ರಿಂದ ಬೋಟಿಂಗ್ ನಡೆಯುತ್ತಿದ್ದು, ನಾಲ್ಕೈದು ಪ್ರಕರಣಗಳನ್ನು ಹೊರತು ಪಡಿಸಿದಂತೆ ಯಾವದೇ ಸಾವು - ನೋವುಗಳು ಸಂಭವಿಸಿಲ್ಲವೆಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗೈಡ್‍ಗಳಾದ ಡಿಂಪಲ್ ಕುಮಾರ್ ಎನ್.ಎಸ್., ಸಿ.ಎಂ.ಮನೀಶ್, ಡಿ.ಪಿ. ಪುರುಷೋತ್ತಮ, ಬಿ.ಸಿ.ರವಿ ಹಾಗೂ ಎಸ್.ಹೆಚ್. ಪ್ರತಾಪ್ ಉಪಸ್ಥಿತರಿದ್ದರು.