ಸಿದ್ದಾಪುರ, ಮಾ. 6: ಏತ ನೀರಾವರಿ ಯೋಜನೆಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಕಟ್ಟಡ ಕುಸಿದು ಬೀಳುವ ಹಂತದಲ್ಲಿದೆ.ಸಮೀಪದ ಕರಡಿಗೋಡು ಗ್ರಾಮದ ಬಸವೇಶ್ವರ ದೇವಾಲಯದ ಸಮೀಪ ಹೊಳೆ ಬದಿಯಲ್ಲಿ ರಾಜ್ಯ ಜಲಸಂಪನ್ಮೂಲ ಇಲಾಖೆ 1972 ರಲ್ಲಿ ಏತ ನೀರಾವರಿ ಯೋಜನೆಯನ್ನು ಕೈಗೊಂಡು, ಕಟ್ಟಡವನ್ನು ನಿರ್ಮಿಸಲಾಗಿತ್ತು. ಬಳಿಕ 1985 ರಲ್ಲಿ ಏತ ನೀರಾವರಿ ಸ್ಥಗಿತಗೊಂಡಿದ್ದು, ವಿದ್ಯುತ್ ಹಾಗೂ ಯಂತ್ರೋಪಕರಣಗಳ ಇಲಾಖೆಯು ತಮ್ಮ ವಶಕ್ಕೆ ತೆಗೆದುಕೊಂಡಿತ್ತು.

ಹಲವಾರು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ಇದೀಗ ಭಾಗಶಃ ಕುಸಿಯುವ ಹಂತದಲ್ಲಿದ್ದು, ನದಿಯ ದಡವಾಗಿದ್ದರಿಂದ ಮಳೆಯಲ್ಲಿ ಕುಸಿದು ಬೀಳುವ ಆತಂಕ ಎದುರಾಗಿದೆ ಎಂದು ಸ್ಥಳೀಯ ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಏತ ನೀರಾವರಿಯ ಕೊಠಡಿಯು ಅಕ್ರಮಗಳ ತಾಣವಾಗಿದ್ದು, ಕೆಲ ಯುವಕರು ರಾತ್ರಿ ವೇಳೆ ಮದ್ಯ ಸೇವಿಸಿ ಬಾಟಲಿಗಳನ್ನು ಎಲ್ಲ್ಲೆಂದರಲ್ಲಿ ಹಾಕಿದ್ದು, ರಸ್ತೆಯ ಮೂಲಕ ಸಂಚರಿಸುವವರಿಗೂ ತೊಂದರೆಯಾಗುತ್ತಿದೆ. ಹೀಗಾಗಿ ಅಪಾಯ ಸಂಭವಿಸುವ ಮುಂಚಿತವಾಗಿ ಪಾಳುಬಿದ್ದಿರುವ ಏತ ನೀರಾವರಿ ಕಟ್ಟಡವನ್ನು ಸಂಬಂಧಪಟ್ಟ ಇಲಾಖೆಯು ಕೆಡವಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕೆಂದು ಕರಡಿಗೋಡು ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.