ಮಡಿಕೇರಿ, ಮಾ. 6: ಕೊಡಗು ಜಿಲ್ಲೆಯ 27 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿ ಕೇಂದ್ರ ಸರಕಾರ ಕರಡು ಅಧಿಸೂಚನೆ ಹೊರಡಿಸಿರುವ ಕುರಿತು ಇದರ ಸಾಧಕ - ಬಾಧಕ ಅರಿತು ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಿರುವದಾಗಿ ಕಸ್ತೂರಿ ರಂಗನ್ ವರದಿ ವಿರೋಧಿ ಸಮಿತಿ ತಿಳಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಹೋರಾಟ ಸಮಿತಿ ಸಂಚಾಲಕ ತೀತಿರ ಧರ್ಮಜ ಉತ್ತಪ್ಪ ಅವರು ಈ ಹಿಂದೆ ಸಮಿತಿಯ ಮೂಲಕ ವಿವಿಧ ಸಂಘ ಸಂಸ್ಥೆ, ಸಾರ್ವಜನಿಕ ಸಭೆ ನಡೆಸಿ ಯೋಜನೆಯನ್ನು ವಿರೋಧಿಸಿ ಹೋರಾಟ ನಡೆಸಲಾಗಿತ್ತು. ಸುಮಾರು 5 ಸಾವಿರದಷ್ಟು ಆಕ್ಷೇಪಣೆಯನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ ಇದೀಗ ಕೇಂದ್ರ ಸರಕಾರದಿಂದ ಏಕಾಏಕಿ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ಈ ಬಗ್ಗೆ ಸಮರ್ಪಕವಾದ ಮಾಹಿತಿ ಇನ್ನೂ ಅಂತರ್ಜಾಲದಲ್ಲಿ ಲಭ್ಯವಾಗಿಲ್ಲ. ಇದರ ಸಾಧಕ - ಬಾಧಕವನ್ನು ಅರಿತು ಮುಂದಿನ ನಡೆಯ ಬಗ್ಗೆ ತೀರ್ಮಾನಿಸಲಾಗುವದು ಎಂದು ತಿಳಿಸಿದ್ದಾರೆ.