ಮಡಿಕೇರಿ, ಮಾ. 7: ವರ್ಷಂ ಪ್ರತಿ ಮಡಿಕೇರಿಯ ರಾಜಾಸೀಟಿನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಸುಳ್ಳು ಲೆಕ್ಕ ತೋರಿಸಿ ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆಯುವ ಅಧಿಕಾರಿಗಳು ಕಾರ್ಯಕ್ರಮವನ್ನೇ ನಡೆಸದೆ ಸುಮಾರು 8 ಲಕ್ಷ ರೂಪಾಯಿ ಲೆಕ್ಕ ತೋರಿಸಿ ಹಣ ನುಂಗಿದ್ದಾರೆ.2015 ಮತ್ತು 2016ರಲ್ಲಿ ಕಾರಣಗಳನ್ನು ಒಡ್ಡಿ ಫಲಪುಷ್ಪ ಪ್ರದರ್ಶನ ನಡೆಸದ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಜನರ ತೆರಿಗೆ ಹಣವನ್ನು ನಾಚಿಗೆ ಇಲ್ಲದೆ ತನ್ನ ಜೇಬಿಗೆ ಇಳಿಸಿದ್ದಾರೆ. 2015ರಲ್ಲಿ ಫಲಪುಷ್ಟ ಪ್ರದರ್ಶನವೇ ನಡೆಯದಿದ್ದರೂ, ಮದೆನಾಡಿನ ಹೈವೇ ನರ್ಸರಿ ಸಂಸ್ಥೆಯಿಂದ ಫಲಪುಷ್ಪ ಪ್ರದರ್ಶನಕ್ಕೆ ರೂ. 99981 ಮೌಲ್ಯದ ಹೂ ಗಿಡಗಳನ್ನು ಖರೀದಿಸಲಾಗಿದೆ ಎಂದು ಲೆಕ್ಕ ತೋರಿಸಿದ್ದು, ಕಾರ್ಯಕ್ರಮಕ್ಕೆ ಬೇಕಾದ ನೆನಪಿನ ಕಾಣಿಕೆಗಳಿಗಾಗಿ ರೂ. 49250 ವೆಚ್ಚ ತೋರಿಸಲಾಗಿದೆ. ಯಡವನಾಡು ಗ್ರಾಮದ ಮೇದಪ್ಪ ಎಂಬವರಿಂದ ರೂ. 40 ಸಾವಿರ ಮೌಲ್ಯದ ಹಣ್ಣು ಮತ್ತು ತರಕಾರಿ ಖರೀದಿಸಿರುವ ಬಗ್ಗೆ ಹಣ ಬಿಡುಗಡೆ ಮಾಡಲಾಗಿದೆ. ಅಲಂಕಾರಿಕಾ ಕಲಾಕೃತಿ ಹೂಗಳ ಜೋಡಣೆಗೆಂದು ಮದೆನಾಡು ಹೈವೇ ನರ್ಸರಿಗೆ ರೂ. 99650. ಅಲಂಕಾರಿಕಾ ಹೂವಿನ ಬೀಜ ಸರಬರಾಜಿಗೆ ಅದೇ ಸಂಸ್ಥೆಗೆ ರೂ. 50750, ವಿದ್ಯುತ್ ಅಲಂಕಾರಕ್ಕೆ ಓಂಕಾರ್ ಡೆಕೋರೇಟರ್ಸ್‍ಗೆ ರೂ.60000 ಬಿಲ್ ಭರಿಸಲಾಗಿದೆ. ಹೀಗೆ ವಿವಿಧ ಖರ್ಚುಗಳ ಒಟ್ಟು ಬಾಪ್ತ್ತು 3,99,631ಕ್ಕೆ ಲೆಕ್ಕ ತೋರಿಸಿ ಹಣ ಲಪಟಾಯಿಸಲಾಗಿದೆ.

ಅದೇ ರೀತಿ 2016ರಲ್ಲೂ 4,09,434 ರೂಪಾಯಿ ಖರ್ಚು ತೋರಿಸಿ 6 ಚೆಕ್‍ಗಳ ಮೂಲಕ ವಿವಿಧ ವ್ಯಕ್ತಿಗಳಿಗೆ ಹಣ ಪಾವತಿಸಿದಂತೆ ಮಾಡಿ ಸರಕಾರದ ಬೊಕ್ಕಸಕ್ಕೆ ವಂಚಿಸ ಲಾಗಿದೆ. 2016ರಲ್ಲಿ ಫಲಪುಷ್ಪ ಪ್ರದರ್ಶನಕ್ಕೆಂದು ಅಲಂಕಾರಿಕಾ ಹೂ ಬೀಜಗಳು ಹಾಗೂ ಪ್ಲಾಸ್ಟಿಕ್ ಟ್ರೇಗಳಿಗಾಗಿ ಬೆಂಗಳೂರಿನ ಶಶಿಧರ್ ಗಾರ್ಡ್‍ಗೆ ರೂ.59955, ಅಲಂಕಾರಿಕಾ ಹೂ ಗಿಡಗಳಿಗಾಗಿ ಹೆರವನಾಡು ಗ್ರಾಮದ ರೇರ್ ಪ್ಲಾಂಟ್ಸ್ ನರ್ಸರಿಗೆ ರೂ. 99983, ಹೂವಿನ ಕುಂಡಗಳಿಗೆ ಮದೆನಾಡಿನ ಹೈವೇ ನರ್ಸರಿಗೆ ರೂ. 39900, ಬಲಮುರಿಯ ಓಯಸೀಸ್ ನರ್ಸರಿಯವರಿಗೆ ಕಲಾಕೃತಿ ಮಾದರಿಯ ಹೂ ಜೋಡಣೆಗೆಂದು ರೂ. 99975 ರೂ. ಪಾವತಿಯ ಲೆಕ್ಕ ತೋರಿಸಲಾಗಿದೆ.

ಮಾಡುವ ಕೆಲಸದ ಮೇಲೆ ನಿಷ್ಠೆ ಇರದ, ಅನ್ನ ಕೊಡುವ ಸರಕಾರಕ್ಕೇ ವಂಚಿಸುವ, ಜನರ ತೆರಿಗೆಯನ್ನೇ ತಿಂದು ತೇಗುವ ಅಧಿಕಾರಿಗಳನ್ನು ಜೈಲಿಗೆ ತಳ್ಳುವ ತನಕದ ತನಿಖೆ ಆಗಬೇಕು; ಜನತೆ ಕೂಡಾ ಪರಿಣಾಮಕಾರಿ ಫಲಿತಾಂಶಕ್ಕೆ ಹೋರಾಡಬೇಕು.