ಭಾಗಮಂಡಲ, ಮಾ. 7: ಭಾಗಮಂಡಲದಲ್ಲಿ ಜನವೇದನಾ ಸಮಾವೇಶ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭ ಟಿ.ಪಿ. ರಮೇಶ್ ಮಾತನಾಡಿ, ಕೇಂದ್ರ ಸರ್ಕಾರ ಗರಿಷ್ಠ ಮುಖಬೆಲೆಯ ನೋಟು ಅಮಾನ್ಯ ಮಾಡಿದ ಬಳಿಕ ಕೂಲಿ ಕಾರ್ಮಿಕರಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಹಿಂದೆ ವಾಜಪೇಯಿ ಸರ್ಕಾರದಲ್ಲಿ ಹಣ ಬದಲಾವಣೆಗೆ ಚಿಂತನೆ ಮಾಡಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಏಕಾಏಕಿ ನೋಟು ಅಮಾನ್ಯ ಮಾಡಿದ್ದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಿದೇಶದಲ್ಲಿನ ಕಪ್ಪು ಹಣವನ್ನು ತಂದು ಬಡವರ ಖಾತೆಗಳಿಗೆ ರೂ. 15000 ನೀಡುವದಾಗಿ ಸುಳ್ಳು ಭರವಸೆ ನೀಡಿದ್ದಾರೆ. ರೂ. 2000 ಮುಖಬೆಲೆಯ ನೋಟುಗಳನ್ನು ಹೊರತಂದಿದ್ದರೂ ರೂ. 2000 ಮುಖಬೆಲೆಯ ಖೋಟಾ ನೋಟುಗಳು ಇದೀಗ ಎಟಿಎಂಗಳಲ್ಲಿ ಕೂಡ ಲಭಿಸುತ್ತಿದೆ. ಹೀಗಾಗಿ ಗ್ರಾಮೀಣ ರೈತರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಮೇಲ್ಮಟ್ಟದ ಚುನಾವಣೆಗಳಿಗೆ ಭಾಗಮಂಡಲ ವ್ಯಾಪ್ತಿಯ ಜನರು ಕಾಂಗ್ರೆಸ್‍ಗೆ ಬಹುಮತ ನೀಡಿ ಇದುವರೆಗೆ ಗೆಲ್ಲಿಸಿಲ್ಲ. ರಾಜಕೀಯದಲ್ಲಿ ಬದಲಾವಣೆಯ ಅಗತ್ಯವಿದೆ. ಮುಂದಿನ ಬಾರಿಯೂ ಸಿದ್ದರಾಮಯ್ಯ ನವರೇ ಅಧಿಕಾರಕ್ಕೆ ಬರಲಿದ್ದಾರೆ ಎಂದರು. ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ ಮಾತನಾಡಿ, ನೋಟು ರದ್ದಾದ ಬಳಿಕ ಆನ್‍ಲೈನ್ ವ್ಯವಹಾರಗಳಿಂದ ಎಷ್ಟೋ ತೆರಿಗೆ ಸಂದಾಯವಾಗುತ್ತಿದ್ದರೂ ಕೇಂದ್ರ ಸರ್ಕಾರದಿಂದ ಜನಸಾಮಾನ್ಯರಿಗೆ ಪ್ರಯೋಜನವಾಗುತ್ತಿಲ್ಲ ಎಂದರು. ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಕಲ್ ರಮಾನಾಥ್ ಮಾತನಾಡಿ, ನೋಟು ರದ್ದತಿಯಿಂದ ದಿನನಿತ್ಯದ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ. ಕಸ್ತೂರಿರಂಗನ್ ವರದಿ ಬಗ್ಗೆ ಚಿಂತೆ ಬೇಡ ಎಂದು ಭರವಸೆ ನೀಡಿದ್ದ ಸಂಸದರು ಸುಳ್ಳು ಭರವಸೆ ನೀಡಿದ್ದು, ಇದೀಗ ಎಲ್ಲಾ ಗ್ರಾಮಗಳನ್ನು ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಗೆ ಸೇರಿಸಿದ್ದಾರೆಂದು ಆರೋಪಿಸಿದರು. ಎಐಸಿಸಿ ಸದಸ್ಯೆ ಉಷಾ ನಾಯರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹುಸೇನ್, ಅರಣ್ಯ ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ಯಾಕೂಬ್, ಕೃಷಿ ಮೋರ್ಚಾ ಅಧ್ಯಕ್ಷ ಹರ್ಷ, ಪ್ರಮುಖರಾದ ಕೊಲ್ಯದ ಗಿರೀಶ್, ನೆರವಂಡ ಉಮೇಶ್, ಭಾಗಮಂಡಲ ವಲಯ ಕಾಂಗ್ರೆಸ್ ಅಧ್ಯಕ್ಷ ಸುನಿಲ್‍ಪತ್ರಾವೋ, ಚೆಟ್ಟಿಮಾನಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹ್ಯಾರೀಸ್, ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್, ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಉಪಸ್ಥಿತರಿದ್ದರು.