ಸೋಮವಾರಪೇಟೆ, ಮಾ. 7: ಗುಡ್ಡಗಾಡು ಪ್ರದೇಶ ಹೊಂದಿರುವ ಕೊಡಗು ಜಿಲ್ಲೆಯನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿದರೆ ಇಲ್ಲಿನ ಜನ ಜೀವನಕ್ಕೆ ಸಂಚಕಾರ ಬರಲಿದ್ದು, ಇದರ ಹೊಣೆಹೊತ್ತು ಜಿಲ್ಲೆಯ ಶಾಸಕರು, ಎಂಎಲ್‍ಸಿಗಳು ಮತ್ತು ಸಂಸದರು ರಾಜೀನಾಮೆ ನೀಡಿ ರಾಜಕೀಯ ರಹಿತ ಹೋರಾಟಕ್ಕೆ ಮುಂದಾಗಬೇಕೆಂದು ಜಾತ್ಯತೀತ ಜನತಾದಳ ಆಗ್ರಹಿಸಿದೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ಸೂಕ್ಷ್ಮ ಪರಿಸರ ವಲಯ ಘೋಷಣೆಯಿಂದ ಜಿಲ್ಲೆಯ ಗ್ರಾಮೀಣ ಜನರು ಜಿಲ್ಲೆಯನ್ನು ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಚುನಾವಣೆ ಸಂದರ್ಭ ಸೂಕ್ಷ್ಮ ಪರಿಸರ ವಲಯ ಘೋಷಣೆಯನ್ನು ಯಾವದೇ ಕಾರಣಕ್ಕೂ ಕಾರ್ಯರೂಪಕ್ಕೆ ತರುವದಿಲ್ಲ ಎಂದು ಎಂದಿದ್ದ ಜಿಲ್ಲೆಯ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು ಹಾಗೂ ಈ ಸಮಸ್ಯೆಯನ್ನು ತನ್ನ ಹೆಗಲ ಮೇಲೆ ಹಾಕಿ ನೀವು ನಿಶ್ಚಿಂತೆಯಿಂದಿರಿ ಎಂದು ಹೇಳಿದ್ದ ಸಂಸದ ಪ್ರತಾಪ್ ಸಿಂಹ ಅವರು ಈಗ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಸುರೇಶ್, ಕೇಂದ್ರ ಸರ್ಕಾರದ ಕರಡು ಅಧಿಸೂಚನೆಯನ್ನು ರದ್ದುಗೊಳಿಸಲು ಮುಂದಾಗಲಿ ಅಥವಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಧುಮುಕಲಿ ಎಂದು ಆಗ್ರಹಿಸಿದರು.

ಸೂಕ್ಷ್ಮ ಪರಿಸರ ವಲಯ ಘೋಷಣೆಯಿಂದ ಜಿಲ್ಲೆಯಲ್ಲಿ ಆಗುವ ಸಾಧಕ-ಬಾಧಕಗಳ ಕುರಿತು ಈ ಹಿಂದಿನ ಹಾಗೂ ಪ್ರಸ್ತುತ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರಗಳು ವಿಫಲವಾಗಿದ್ದು, ಯಾರನ್ನೋ ಮೆಚ್ಚಿಸಲು ಕೊಡಗಿನ ಜನರನ್ನು ಬಲಿಪಡೆಯಲು ಮುಂದಾಗಿವೆ. ಮುಂದಿನ ದಿನಗಳಲ್ಲಿ ಕೊಡಗಿನ 55 ಗ್ರಾಮಗಳ ಜನರನ್ನು ಒಗ್ಗೂಡಿಸಿ ಪರಿಸರ ಸೂಕ್ಷ್ಮ ವಲಯ ಘೋಷಣೆಯಾಗುವದರಿಂದ ಆಗುವ ತೊಂದರೆ ಕುರಿತು ಮನವರಿಕೆ ಮಾಡಿಕೊಡಲಾಗುವದು. ಪ್ರತಿ ಗಾ.್ರಪಂ. ವ್ಯಾಪ್ತಿಯಲ್ಲಿ ಗ್ರಾಮಸಭೆ ಕರೆದು, ನಿರ್ಣಯವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲು ಪಕ್ಷದ ವತಿಯಿಂದ ಜನಜಾಗೃತಿ ಮೂಡಿಸಲಾಗುವದು ಎಂದು ಸುರೇಶ್ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜೆಡಿಎಸ್‍ನ ಚುನಾವಣಾ ಉಸ್ತುವಾರಿ ಕಾರ್ಯದರ್ಶಿ ವಿ.ಎಂ. ವಿಜಯ ಮಾತನಾಡಿ, ಕೇರಳ ರಾಜ್ಯ ಸರ್ಕಾರ ತನ್ನ ರಾಜ್ಯದಲ್ಲಿನ ಪಶ್ಚಿಮಘಟ್ಟ ವ್ಯಾಪ್ತಿಯ ಕುರಿತು ಅಲ್ಲಿನ ಜನಗಳ ಸ್ಥಿತಿಗತಿ, ಕೃಷಿ ವಲಯ, ಸೇರಿದಂತೆ ಎಲ್ಲಾ ವಿಷಯಗಳ ಕುರಿತು ವಾಸ್ತವ ಸ್ಥಿತಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ಸೂಕ್ಷ್ಮ ಪರಿಸರ ವಲಯದ ಅಪಾಯದಿಂದ ಪಾರಾಗಿದೆ. ಆದರೆ, ರಾಜ್ಯ ಸರ್ಕಾರ ರಾಜ್ಯದಲ್ಲಾಗುವ ಸಾಧಕ-ಬಾಧಕಗಳ ಬಗ್ಗೆ ಪೂರ್ಣ ವರದಿಯನ್ನು ಕೇಂದ್ರಕ್ಕೆ ನೀಡಿಲ್ಲ. ಕೇವಲ ವೈಮಾನಿಕ ಸಮೀಕ್ಷಾ ವರದಿಯನ್ನು ನೀಡಿ ಜವಾಬ್ದಾರಿಯಿಂದ ನುಣಚಿಕೊಂಡಿರುವದು ಖಂಡನೀಯ ಎಂದರು.

ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಯಾವ ವರದಿ ಸಲ್ಲಿಸಿದೆ ಎಂಬದನ್ನು ಬಹಿರಂಗ ಪಡಿಸಿಲ್ಲ. ರಾಜ್ಯ ಸರ್ಕಾರವೂ ಕೂಡ ಕೇಂದ್ರಕ್ಕೆ ಸಲ್ಲಿಸಿದ್ದ ವರದಿಯನ್ನು ನೀಡಲು ಮೀನಾಮೇಷ ಎಣಿಸುತ್ತಿರುವದು ಸಂಶಯಕ್ಕೆ ಎಡೆಮಾಡಿದೆ. ರಾಜ್ಯ ಸರ್ಕಾರ ಭೌತಿಕ ಸಮೀಕ್ಷೆ ನಡೆಸದೆ ಇರುವದು ಖಂಡನೀಯ ಎಂದು ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಎಸ್.ಪಿ. ಭರತ್ ಕುಮಾರ್ ಹೇಳಿದರು.

ಜಾಗತಿಕ ತಾಪಮಾನದ ನೆಪವೊಡ್ಡಿ ಸೂಕ್ಷ್ಮ ಪರಿಸರ ವಲಯ ಘೋಷಣೆಗೆ ಮುಂದಾಗಿದ್ದು, ಇದುವರೆಗೂ ಅರಣ್ಯ ಇಲಾಖೆಗೆ ಹರಿದುಬಂದಿರುವ ಕೋಟ್ಯಾಂತರ ಅನುದಾನದಲ್ಲಿ ಪರಿಸರ ರಕ್ಷಣೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬದನ್ನು ಅರಣ್ಯ ಇಲಾಖೆ ತಿಳಿಸಲಿ. ಡೋಂಗಿ ಪರಿಸರವಾದಿಗಳ ಕುತಂತ್ರದಿಂದ ಇಂತಹ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು, ವೈಜ್ಞಾನಿಕವಾಗಿ ಇರುವ ಅರಣ್ಯವನ್ನು ಸಂರಕ್ಷಿಸುವ ಕಾರ್ಯವನ್ನು ಸರ್ಕಾರ ಮಾಡಲಿ ಎಂದರು.

ಒಂದು ವೇಳೆ ಸೂಕ್ಷ್ಮ ಪರಿಸರ ತಾಣ ಘೋಷಣೆ ಮಾಡಲು ಸರ್ಕಾರಗಳು ಮುಂದಾದರೆ ಕೊಡಗಿನಾದ್ಯಂತ ರಾಜಕೀಯ ರಹಿತವಾಗಿ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಪ್ರಮುಖರು ಎಚ್ಚರಿಸಿದರು.

ಗೋಷ್ಠಿಯಲ್ಲಿ ಯುವ ಜನತಾದಳದ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ, ಪಕ್ಷದ ಮುಖಂಡರಾದ ಬಗ್ಗನ ಅನಿಲ್, ಗಿರೀಶ್, ತ್ರಿಶೂಲ್, ಎಸ್.ಎಂ. ಡಿಸಿಲ್ವಾ ಉಪಸ್ಥಿತರಿದ್ದರು.