ಮಡಿಕೇರಿ, ಮಾ. 7: ಬಡವರ್ಗದ ಮಂದಿಗೆ ಅಗತ್ಯ ನಿವೇಶನ ಮತ್ತು ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಹೊದ್ದೂರು ಗ್ರಾ.ಪಂ. ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿರುವ ಬಹುಜನ ಕಾರ್ಮಿಕ ಸಂಘ ತಾ. 9 ರಂದು ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಕಾರ್ಯದರ್ಶಿ ಕೆ. ಮೊಣ್ಣಪ್ಪ, ಹೊದ್ದೂರು ಗಾ.ಪಂ. ವ್ಯಾಪ್ತಿಯ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಕಳೆದ ಹಲವು ವರ್ಷಗಳಿಂದ ನಿವೇಶನಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ್ದರೂ ಇಲ್ಲಿಯವರೆಗೆ ಬೇಡಿಕೆ ಈಡೇರಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಸುಮಾರು 45 ಕುಟುಂಬಗಳು 2009-10ನೇ ಸಾಲಿನಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು, ನಂತರದ ವರ್ಷಗಳಲ್ಲಿ ಸಲ್ಲಿಕೆಯಾದ ಅರ್ಜಿಗಳು ಸೇರಿದಂತೆ 100 ಕ್ಕೂ ಅಧಿಕ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಹೊದ್ದೂರು ಗ್ರಾಮದ ಪಾಲೆಮಾಡಿನಲ್ಲಿ ನವಗ್ರಾಮ ಯೋಜನೆಗೆ ಕಾಯ್ದಿರಿಸಲಾಗಿದ್ದ ಜಾಗವನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಂಡು ಬಡ ಮಂದಿಗೆ ಹಂಚಲು ಗ್ರಾ.ಪಂ ಯಾವದೇ ಕ್ರಮ ಕೈಗೊಂಡಿಲ್ಲ. ಶ್ರೀಮಂತರೊಂದಿಗೆ ಶಾಮೀಲಾಗಿರುವ ಕೆಲವು ಆಡಳಿತಗಾರರು ಬಡವರ್ಗಕ್ಕೆ ಅನುಕೂಲ ಕಲ್ಪಿಸದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಮೊಣ್ಣಪ್ಪ ಆರೋಪಿಸಿದರು.

ಕ್ರಿಕೆಟ್ ಸಂಸ್ಥೆಗೆ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ನೀಡುವ ಮೂಲಕ ಬಡವರ್ಗದ ಮಂದಿಗೆ ಅನ್ಯಾಯ ಮಾಡಲಾಗಿದೆ. ಈ ಹಿಂದೆ ಮಂಜೂರಾದ ಜಾಗವನ್ನು ದುರಸ್ತಿ ಪಡಿಸಿಕೊಡುವಂತೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳ ಮೂಲಕ ತಹಶೀಲ್ದಾರರಿಗೆ ಮನವಿ ಮಾಡಲಾಗಿತ್ತು. ಆದರೆ, ಜಾಗದ ದುರಸ್ತಿ ಕಾರ್ಯ ಇಲ್ಲಿಯವರೆಗೆ ನಡೆಸಿಲ್ಲವೆಂದು ಆರೋಪಿಸಿದರು.

ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ವಿಫಲವಾಗಿದ್ದು, ತಾ. 9 ರಂದು ಬೆಳಿಗ್ಗೆ 11 ಗಂಟೆಗೆ ಹೊದ್ದೂರು ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಲಾಗುವದು ಎಂದರು. ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಮೊಣ್ಣಪ್ಪ ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಗ್ರಾಪಂ. ಸದಸ್ಯೆ ಕುಸುಮಾವತಿ, ಬಹುಜನ ಕಾರ್ಮಿಕ ಸಂಘÀದ ಸದಸ್ಯರಾದ ಸಿದ್ದು, ಜಾಜು, ಮಂಜುಳಾ ಹಾಗೂ ಕಿರಣ್ ಜಗದೀಶ್ ಉಪಸ್ಥಿತರಿದ್ದರು.