ಸುಂಟಿಕೊಪ್ಪ, ಮಾ. 7: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಮೀನು, ಕೋಳಿ, ಕುರಿ ಮಾರುಕಟ್ಟೆ ಹಾಗೂ ಮಾಂಸದ ಅಂಗಡಿಯ ಹರಾಜು ಪ್ರಕ್ರಿಯೆಯಲ್ಲಿ ಬಿಡ್ಡುದಾರರು ಕೋಳಿ ಮಾಂಸದ ಅಂಗಡಿಯ ಹರಾಜಿಗೆ ಏಕ ವ್ಯಕ್ತಿಯ ಹೆಸರಿನಲ್ಲಿ 15 ಇ.ಎಂ.ಡಿ. ಸಲ್ಲಿಸಿದ್ದು, ತೀವ್ರ ತರಹದ ಗದ್ದಲ-ಗೊಂದಲ ಏರ್ಪಟ್ಟು, ಮಾತಿನ ಚಕಮಕಿ ನಡೆದು ಪೊಲೀಸರ ಮಧ್ಯಪ್ರವೇಶದಿಂದ ಹರಾಜು ಪ್ರಕ್ರಿಯೆಯನ್ನು ನಡೆಸಲಾಯಿತು.
ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಪಿಡಿಓ ಮೇದಪ್ಪ ಹಾಗೂ ಉಪಾಧ್ಯಕ್ಷ ಪಿ.ಆರ್. ಸುಕುಮಾರ್ ಅವರ ಸಮಕ್ಷಮದಲ್ಲಿ ಹರಾಜು ಪ್ರಕ್ರಿಯೆ ನಡೆಯಿತು.
ಕೋಳಿ ಮಾಂಸದ ಅಂಗಡಿಗೆ 52 ಮಂದಿ ಡಿಡಿ ಸಲ್ಲಿಸಿದ್ದು, ಅದರಲ್ಲಿ ಒಬ್ಬರೇ 15 ಜನರ ಹೆಸರಿನಲ್ಲಿ ಒಂದೇ ಡಿಡಿಯನ್ನು ಸಲ್ಲಿಸಿದ್ದನ್ನು ಗಮನಿಸಿದ ಬಿಡ್ಡ್‍ದಾರರು ಪ್ರಕಟಣೆಯಲ್ಲಿ ಒಬ್ಬರಿಗೆ ಒಂದೇ ಡಿಡಿ ಸಲ್ಲಿಸಲು ಅವಕಾಶವಿದೆ ಎಂದು ಜಾಹೀರಾತು ನೀಡಿ ನಂತರ 15 ಜನರ ಹೆಸರಿನಲ್ಲಿ ಒಂದೇ ಡಿಡಿ ಸಲ್ಲಿಸಿದ್ದನ್ನು ಯಾವ ಮಾನದಂಡದಲ್ಲಿ ಸ್ವೀಕರಿಸಿದ್ದೀರಾ ಎಂದು ಪಂಚಾಯಿತಿ ಆಡಳಿತ ಮಂಡಳಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ದಿಕ್ಕಾರ ಕೂಗಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪಂಚಾಯಿತಿ ಆಡಳಿತ ಪ್ರತ್ಯೇಕವಾಗಿ ಸಭೆ ನಡೆಸಿ 52 ಮಂದಿ ಟೆಂಡರ್‍ದಾರರನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲು ತೀರ್ಮಾನಿಸಿದರು.
ಲಾಟರಿ ಮೂಲಕ ಕೋಳಿ ಮಾಂಸವನ್ನು ಮಾರುಕಟ್ಟೆ 3 ಮಳಿಗೆಯಲ್ಲಿ ಪಟ್ಟಣದ ಹೊರಗಿನ ಪರವಾನಗಿ ಮೂಲಕ 7 ಮಂದಿಗೆ ದಕ್ಕಿದ್ದು ಅದನ್ನು ಅವರ ಸುರ್ಪದಿಗೆ ನೀಡಲು ತೀರ್ಮಾನಿಸಲಾಯಿತು.
ಹರಾಜು ಪ್ರಕ್ರಿಯೆಯಲ್ಲಿ ಒಬ್ಬರಿಗೆ ಒಂದೇ ಡಿಡಿ ಸಲ್ಲಿಸಲು ಅವಕಾಶವಿದ್ದು, ಅದರಂತೆ ಕಾನೂನು ಪ್ರಕಾರ ಹರಾಜನ್ನು ನಡೆಸಲಾಗಿದೆ. ಗೊಂದಲಕ್ಕೆ ಅವಕಾಶ ನೀಡಲಿಲ್ಲ ಎಂದು ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ತಿಳಿಸಿದರು.