ಕುಶಾಲನಗರ, ಮಾ. 7: ಕುಶಾಲನಗರ ಪಟ್ಟಣ ಪಂಚಾಯಿತಿ 2017-18ನೇ ಸಾಲಿನ ಬಜೆಟ್ ಮಂಡನೆಯಾಗಿದ್ದು, ರೂ. 20 ಲಕ್ಷದ 72 ಸಾವಿರ ಉಳಿತಾಯ ಬಜೆಟ್ ಮಂಡಿಸಲಾಗಿದೆ. ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ನಿರೀಕ್ಷಿತ ಆದಾಯ ವಿವರ ಹಾಗೂ ಅಂದಾಜು ಖರ್ಚು ವೆಚ್ಚದ ಆಯವ್ಯಯದ ವಿವರ ಒದಗಿಸಿದರು.

2017-18ನೇ ಸಾಲಿನ ನಿರೀಕ್ಷಿತ ಆದಾಯ ರೂ. 6 ಕೋಟಿ 41 ಲಕ್ಷಗಳಾಗಿದ್ದು, ನಿರೀಕ್ಷಿತ ಖರ್ಚು ರೂ. 6 ಕೋಟಿ 20 ಸಾವಿರ ಎಂದು ಮಾಹಿತಿ ಒದಗಿಸಿದರು. ಎರಡನೇ ಬಾರಿಗೆ ಬಜೆಟ್ ಮಂಡಿಸಿದ ಎಂ.ಎಂ. ಚರಣ್, ಕುಶಾಲನಗರ ಪಟ್ಟಣಕ್ಕೆ ಮೂಲಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ರಸ್ತೆ, ನೀರು, ಚರಂಡಿ, ಸ್ವಚ್ಛತೆ, ಬೀದಿ ದೀಪ ಮುಂತಾದ ವ್ಯವಸ್ಥೆಗಳನ್ನು ವೈಜ್ಞಾನಿಕವಾಗಿ ರೂಪಿಸುವದಾಗಿ ತಿಳಿಸಿದರು. ಈ ನಿಟ್ಟಿನಲ್ಲಿ 2017-18ನೇ ಸಾಲಿಗೆ ಕುಶಾಲನಗರ ಪಟ್ಟಣದಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.

ಪಂಚಾಯಿತಿಯನ್ನು ಆರ್ಥಿಕವಾಗಿ ಸದೃಢಗೊಳಿಸಲು ಆದಾಯ ಮೂಲಗಳನ್ನು ಸಂಗ್ರಹಿಸುವದರೊಂದಿಗೆ ಅನುದಾನ ಪಡೆದು ಕುಶಾಲನಗರ ಪಟ್ಟಣದಲ್ಲಿ ಕಿರು ನೀರು ವಿತರಣಾ ವ್ಯವಸ್ಥೆ, ಪಂಚಾಯಿತಿ ನೂತನ ಕಟ್ಟಡ, ವಾಣಿಜ್ಯ ಮಳಿಗೆಗಳ ನಿರ್ಮಾಣ ಸೇರಿದಂತೆ ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕಲ್ಪಿಸಲಾಗುವದು ಎಂದಿದ್ದಾರೆ. ಕಾವೇರಿ ನದಿ ಸ್ವಚ್ಛತೆ ಮಾಡುವ ನಿಟ್ಟಿನಲ್ಲಿ ರೂ. 5 ಲಕ್ಷ ಮೀಸಲಿರಿಸಲಾಗಿದೆ ಎಂದು ಅವರು ತಿಳಿಸಿದರು. ಎಸ್‍ಎಫ್‍ಸಿ ಅನುದಾನ, 14ನೇ ಹಣಕಾಸು ಅನುದಾನ, ಆಸ್ತಿ ತೆರಿಗೆ, ಸೇರಿದಂತೆ ಹಲವು ನಿರೀಕ್ಷಿತ ಆದಾಯಗಳಿಂದ ಒಟ್ಟು ರೂ. 6 ಕೋಟಿ 41 ಲಕ್ಷ ಸಂಗ್ರಹವಾಗಲಿದ್ದು, ನೌಕರರ ವೇತನಕ್ಕೆ ರೂ. 1 ಕೋಟಿ 79 ಲಕ್ಷ, ರಸ್ತೆ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ರೂ. 27 ಲಕ್ಷ, ಮಾರುಕಟ್ಟೆ ಅಭಿವೃದ್ಧಿಗೆ ರೂ. 20 ಲಕ್ಷ, ಘನತ್ಯಾಜ್ಯ ನಿರ್ವಹಣೆಯ ವಾಹನ ಖರೀದಿಗೆ ರೂ. 30 ಲಕ್ಷ, ಕಛೇರಿಯ ರೆಕಾರ್ಡ್ ರೂಂ ಆಧುನೀಕರಣಕ್ಕೆ ರೂ. 5 ಲಕ್ಷ, ಪಟ್ಟಣದ ಬಡಜನತೆ ಮತ್ತು ಎಸ್‍ಸಿ-ಎಸ್‍ಟಿ ಜನಾಂಗದ ಸಹಾಯ ಧನಕ್ಕೆ ರೂ. 6 ಲಕ್ಷ, ಪೌರಕಾರ್ಮಿಕರ ಬೆಳಗಿನ ಉಪಹಾರಕ್ಕಾಗಿ ರೂ. 2 ಲಕ್ಷ, ಪೌರಕಾರ್ಮಿಕರ ಮನೆ ರಿಪೇರಿಗಾಗಿ ರೂ. 2 ಲಕ್ಷ ಸೇರಿದಂತೆ ಒಟ್ಟು ರೂ. 6 ಕೋಟಿ 20 ಲಕ್ಷ ನಿರೀಕ್ಷಿತ ಖರ್ಚು ಅಂದಾಜಿಸಲಾಗಿದೆ ಎಂದು ಅಧ್ಯಕ್ಷ ಎಂ.ಎಂ. ಚರಣ್ ಮಾಹಿತಿ ನೀಡಿದರು.

ಪಟ್ಟಣದ ಸ್ವಚ್ಛತೆಗಾಗಿ ಈ ಸಾರಿಯ ಬಜೆಟ್‍ನಲ್ಲಿ ಅನುದಾನ ಮೀಸಲಿರಿಸುವದರೊಂದಿಗೆ ಸ್ವಚ್ಛ ಕುಶಾಲನಗರ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಮಧುಸೂದನ್ ಪ್ರತಿಕ್ರಿಯಿಸಿದರು.

ಬಜೆಟ್‍ನಲ್ಲಿ ಶಾಲಾ-ಕಾಲೇಜು ಮಕ್ಕಳಿಗೆ ಯೋಗ ತರಬೇತಿಗೆ 1 ವಾರದ ಶಿಬಿರ ಏರ್ಪಡಿಸಲು ಪ್ರಸ್ತಾವನೆ ನೀಡಲಾಗಿರುವದು ಶ್ಲಾಘನೀಯ ಎಂದಿರುವ ಪಂಚಾಯಿತಿ ಉಪಾಧ್ಯಕ್ಷ ಶರವಣಕುಮಾರ್, ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಳಿಸಲು ಬಜೆಟ್‍ನಲ್ಲಿ ಅನುದಾನ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.

ಹಿರಿಯ ಸದಸ್ಯ ಹೆಚ್.ಜೆ. ಕರಿಯಪ್ಪ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿ, ನದಿ ಮಾಲಿನ್ಯ ತಪ್ಪಿಸಲು ಬಜೆಟ್‍ನಲ್ಲಿ ಅನುದಾನ ಮೀಸಲಿರಿಸಿರುವದು ಸ್ವಾಗತಾರ್ಹ ಎಂದಿದ್ದಾರೆ. ಜೆಡಿಎಸ್ ಸದಸ್ಯ ಹೆಚ್.ಡಿ. ಚಂದ್ರು ಪ್ರತಿಕ್ರಿಯಿಸಿ, ಪಟ್ಟಣದ ಬಡಜನತೆ, ಪರಿಶಿಷ್ಟ ಜಾತಿ, ಪಂಗಡದ ಜನಾಂಗಕ್ಕೆ ಬಜೆಟ್‍ನಲ್ಲಿ ಹಣ ಮೀಸಲಿರಿಸಿರುವದು ಸಂತಸ ತಂದಿದೆ ಎಂದರು.

ಅಭಿವೃದ್ಧಿಯ ಪಥದಲ್ಲಿ ಮುನ್ನುಗ್ಗುತ್ತಿರುವ ಕುಶಾಲನಗರ ಪಟ್ಟಣದ 2017-18ನೇ ಸಾಲಿನ ಬಜೆಟ್‍ನಲ್ಲಿ ಕೇವಲ ರೂ. 20 ಲಕ್ಷ ಉಳಿತಾಯ ತೋರಿಸಿರುವದು ನಿರಾಶಾದಾಯಕ ಎಂದು ತಿಳಿಸಿರುವ ನಾಮನಿರ್ದೇಶಿತ ಸದಸ್ಯ ನಂಜುಂಡಸ್ವಾಮಿ, ಆದಾಯದ ನಿರೀಕ್ಷೆ ಹೆಚ್ಚಿಸಬೇಕಾಗಿತ್ತು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಜಿ ಅಧ್ಯಕ್ಷ ಡಿ.ಕೆ. ತಿಮ್ಮಪ್ಪ ಮಾತನಾಡಿ, ಕುಶಾಲನಗರದ ಸಮಗ್ರ ಅಭಿವೃದ್ಧಿಗೆ ಬಜೆಟ್‍ನಲ್ಲಿ ಹಣ ಮೀಸಲಿರಿಸಲಾಗಿದೆ. ಅದರ ಸದುಪಯೋಗವಾಗಬೇಕೆಂದು ಕೋರಿದ್ದಾರೆ.

ಈ ಸಂದರ್ಭ ಕುಶಾಲನಗರದ ರಸ್ತೆ ಅಭಿವೃದ್ಧಿ ಹಾಗೂ ಬಡಾವಣೆಗಳ ಅಭಿವೃದ್ಧಿಗೆ ಸರಕಾರದಿಂದ ರೂ. 5 ಕೋಟಿ ರೂಗಳ ಅನುದಾನ ಒದಗಿಸುವ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಮ್ ಹಾಗೂ ಹಿಂದಿನ ಉಸ್ತುವಾರಿಯಾಗಿದ್ದ ದಿನೇಶ್ ಗುಂಡೂರಾವ್ ಅವರಿಗೆ ಆಡಳಿತ ಮಂಡಳಿ ಅಭಿನಂದನೆ ಯೊಂದಿಗೆ ಧನ್ಯವಾದ ಸಲ್ಲಿಸಿತು.

ಬಜೆಟ್ ಸಭೆಯಲ್ಲಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಸರ್ವ ಸದಸ್ಯರು ಉಪಸ್ಥಿತರಿದ್ದರು.