2ನೇ ಟೆಸ್ಟ್‍ನಲ್ಲಿ ಭಾರತಕ್ಕೆ ಜಯ
ಬೆಂಗಳೂರು, ಮಾ. 7: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‍ನಲ್ಲಿ ಗೆಲ್ಲಲು 188 ರನ್ ಗಳ ಗುರಿ ಪಡೆದಿದ್ದ ಆಸ್ಟ್ರೇಲಿಯಾವನ್ನು 112 ರನ್‍ಗಳಿಗೆ ಆಲೌಟ್ ಮಾಡಿ 75 ರನ್‍ಗಳ ಅಂತರದಿಂದ ಜಯಗಳಿಸಿದೆ. ಟಾಸ್ ಗೆದ್ದು ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ 189 ರನ್‍ಗಳಿಗೆ ಆಲೌಟ್ ಆಗಿತ್ತು. ಬಳಿಕ ಇನ್ನಿಂಗ್ಸ್ ಪ್ರಾರಂಭಿಸಿದ್ದ ಆಸ್ಟ್ರೇಲಿಯಾ 276 ರನ್‍ಗಳಿಗೆ ಆಲೌಟ್ ಆಗಿ 87 ರನ್ ಮುನ್ನಡೆ ಸಾಧಿಸಿತ್ತು. ನಂತರ ಬ್ಯಾಟ್ ಮಾಡಿದ ಭಾರತ ಎಚ್ಚರಿಕೆಯ ಬ್ಯಾಟಿಂಗ್ ಮಾಡಿ 274 ರನ್ ಗಳಿಸಿತು. ಇದರೊಂದಿಗೆ ಭಾರತ ಆಸ್ಟ್ರೇಲಿಯಾಗೆ 188 ರನ್‍ಗಳ ಗುರಿ ನೀಡಿತು ಇದನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 112 ರನ್‍ಗಳಿಗೆ ಆಲೌಟ್ ಆಗಿ ಭಾರತಕ್ಕೆ ಶರಣಾಯಿತು.
ಲಂಕಾ ಗುಂಡಿಗೆ ಭಾರತೀಯ ಮೀನುಗಾರ ಬಲಿ
ರಾಮೇಶ್ವರಂ, ಮಾ. 7: ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾದಳದ ಸೈನಿಕರು ಏಕಾಏಕಿ ಗುಂಡಿನ ಧಾಳಿ ನಡೆಸಿ ಒಬ್ಬ ಮೀನುಗಾರನನ್ನು ಹತ್ಯೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಸಮುದ್ರದ ಗಡಿಯಲ್ಲಿ ಈ ಘಟನೆ ನಡೆದಿದೆ. ಮೃತ ಮೀನುಗಾರನನ್ನು ತಮಿಳುನಾಡಿನ ರಾಮೇಶ್ವರದ ಬ್ರಿಡೋ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇಬ್ಬರು ಮೀನುಗಾರರಿಗೆ ಗಾಯಗಳಾಗಿವೆ. ಲಂಕಾದ ನೌಕಾದಳ ಸೈನಿಕರು ಭಾರತೀಯ ಮೀನುಗಾರರು ಮೀನು ಹಿಡಿಯುವ ಸ್ಥಳಕ್ಕೆ ಅತಿಕ್ರಮ ಪ್ರವೇಶ ಮಾಡಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ವಿಶ್ವದ ಟಾಪ್ 10 ಪಟ್ಟಿಯಲ್ಲಿ ಬೆಂಗಳೂರು ವಿಜ್ಞಾನ ಸಂಸ್ಥೆ
ನವದೆಹಲಿ, ಮಾ. 7: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ವಿಶ್ವದ ಶ್ರೇಷ್ಠ ವಿಶ್ವವಿದ್ಯಾಲಯಗಳ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಇದರೊಂದಿಗೆ ದೇಶದ ವಿವಿಯೊಂದು ಟಾಪ್ 10 ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಸ್ಥಾನ ಪಡೆದಿದೆ ಖ್ಯಾತಿ ಗಳಿಸಿದೆ. ಜಾಗತಿಕ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಟೈಮ್ಸ್ ಹೈಯರ್ ಎಜುಕೇಶನ್ ಬಿಡುಗಡೆ ಮಾಡಿದ್ದು ಇದರಲ್ಲಿ ಬೆಂಗಳೂರು ವಿಜ್ಞಾನ ಸಂಸ್ಥೆ 8ನೇ ಸ್ಥಾನ ಪಡೆದಿದೆ. ಇನ್ನು ಐಐಎಸ್ಸಿ ಸಂಸ್ಥೆ ಹೊರತು ಪಡಿಸಿ ದೇಶದ ಯಾವದೇ ಶಿಕ್ಷಣ ಸಂಸ್ಥೆ ಪಟ್ಟಿಯಲ್ಲಿ ಸ್ಥಾನಪಡೆದಿಲ್ಲ. ಅಮೇರಿಕಾದ ಕ್ಯಾಲಿಫೆÇೀರ್ನಿಯಾ ತಾಂತ್ರಿಕ ಶಿಕ್ಷಣ ಸಂಸ್ಥೆ ಪ್ರಥಮ ಸ್ಥಾನದಲ್ಲಿದೆ. ಇನ್ನು ಫ್ರಾನ್ಸ್‍ನ ಎಕೋಲ್ ನಾರ್ಮಲೆ ಎರಡನೇ ಸ್ಥಾನದಲ್ಲಿದ್ದು ದಕ್ಷಿಣ ಕೊರಿಯಾ ಮೂರನೇ ಸ್ಥಾನದಲ್ಲಿದೆ.
ಪ್ರತಿಬಿಂಬ-ಮುಖ್ಯಮಂತ್ರಿ ಮಾಹಿತಿ ಕೋಶ ಬಿಡುಗಡೆ
ಬೆಂಗಳೂರು, ಮಾ. 7: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕಳೆದ 4 ವರ್ಷಗಳಲ್ಲಿ ಮಾಡಿರುವ ಆಡಳಿತ, ಸಾಧನೆಗಳನ್ನು ಜನತೆ ಮುಂದಿಡುವ ಪ್ರತಿಬಿಂಬ-ಮುಖ್ಯಮಂತ್ರಿಯವರ ಮಾಹಿತಿ ಕೋಶ ಮಂಗಳವಾರ ಲೋಕಾರ್ಪಣೆಗೊಂಡಿದೆ. ರಾಜ್ಯದ ಜನತೆಗೆ ಚುನಾವಣೆ ವೇಳೆ ನೀಡಿದ್ದ ಭರವಸೆಗಳೇನು, ಚುನಾವಣಾ ಪ್ರಣಾಳಿಕೆ ನೀಡಿದ್ದ ಆಶಾಸ್ವನೆಗಳು, ಮಾಡಿರುವ ಸಾಧನೆಗಳನ್ನು ರಾಜ್ಯದ ಜನರ ಮುಂದೆ ಇಡುವ ಪ್ರಯತ್ನವಾಗಿ ಪ್ರತಿಬಿಂಬ? ಮುಖ್ಯಮಂತ್ರಿಯವರ ಮಾಹಿತಿಕೋಶ ಬಿಡುಗಡೆಯಾಗಿದೆ. ಅಂತರ್ಜಾಲ ಅಧರಿತ ಈ ಮಾಹಿತಿಕೋಶವು ಎಲ್ಲರಿಗೂ ಮುಕ್ತವಾಗಿ ಲಭ್ಯವಿರಲಿದೆ. ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ತರುವ ನಿಟ್ಟಿನಲ್ಲಿ ಪ್ರತಿಬಿಂಬ ಮಾಹಿತಿಕೋಶವು ಮಹತ್ವದ ಹೆಜ್ಜೆಯಾಗಿದೆ.
ಮಲೇಷ್ಯಾನರಿಗೆ ಉತ್ತರ ಕೊರಿಯಾ ದಿಗ್ಭಂಧನ
ಪೆÇ್ಯೀಂಗ್ಯಾಂಗ್, ಮಾ. 7: ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಮಲ ಸಹೋದರ ಕಿಮ್ ಜಾಂಗ್ ನಮ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೇಷ್ಯಾ ವಿರುದ್ಧ ಕೆಂಗಣ್ಣು ಬೀರಿದ್ದು, ತನ್ನ ದೇಶದಲ್ಲಿರುವ ಮಲೇಷ್ಯಾ ನಾಗರಿಕರು ದೇಶ ಬಿಟ್ಟು ತೆರಳದಂತೆ ಉತ್ತರ ಕೊರಿಯಾ ದಿಗ್ಭಂಧನ ಹೇರಿದೆ. ಮೂಲಗಳ ಪ್ರಕಾರ ಕಿಮ್ ಜಾಂಗ್ ನಮ್ ಹತ್ಯೆ ಸಂಬಂಧ ದಕ್ಷಿಣ ಕೊರಿಯಾ ಮತ್ತು ವಿಶ್ವ ಸಮುದಾಯ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರನ್ನು ಟೀಕಿಸುತ್ತಿದ್ದು, ಇತ್ತ ಉತ್ತರ ಕೊರಿಯಾ ಮಾತ್ರ ಮಲೇಷ್ಯಾವನ್ನು ಟೀಕಿಸುತ್ತಿದೆ. ಹತ್ಯೆ ನಡೆದಿರುವದು ಮಲೇಷ್ಯಾ ಕೌಲಾಲಂಪುರದಲ್ಲಿ. ಹೀಗಾಗಿ ಹತ್ಯೆ ಸಂಬಂಧ ಮಲೇಷ್ಯಾ ಸರ್ಕಾರ ಸಂಪೂರ್ಣ ವರದಿ ನೀಡಬೇಕು ಎಂದು ಉತ್ತರ ಕೊರಿಯಾ ಹೇಳಿದೆ.
ಮ್ಯಾನ್‍ಹೋಲ್‍ನಲ್ಲಿ ಉಸಿರುಗಟ್ಟಿ ಸಾವು
ಬೆಂಗಳೂರು, ಮಾ. 7: ಸಿ.ವಿ. ರಾಮನ್ ನಗರದ ಮುಖ್ಯರಸ್ತೆಯಲ್ಲಿರುವ ಮ್ಯಾನ್‍ಹೋಲ್‍ಗೆ ದುರಸ್ಥಿಗಾಗಿ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮ್ಯಾನ್‍ಹೋಲ್‍ನಲ್ಲಿ ಬಿದ್ದು ಮೃತಪಟ್ಟವರು ಮೂವರು ಆಂಧ್ರ ಮೂಲದವರು ಎಂದು ತಿಳಿದು ಬಂದಿದೆ. ಕೆಲವು ತಿಂಗಳ ಹಿಂದೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು. ಮೃತರನ್ನು ವೀರಯ್ಯ, ಆಂಜನೇಯ ರೆಡ್ಡಿ, ತಾವತ್ತಿನಾಯ್ಡು ಎಂದು ಗುರುತಿಸಲಾಗಿದೆ. ನೀರಿನ ಸೋರಿಕೆ ತಡೆಯಲು ರಾತ್ರಿ 11 ಗಂಟೆ ನಂತರ ಕಾರ್ಮಿಕರು ಮ್ಯಾನ್‍ಹೋಲ್‍ಗೆ ಇಳಿದಿದ್ದರು. 12.30ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಟ್ರ್ಯಾಕ್ಟರ್‍ನಲ್ಲಿ ಬಂದಿದ್ದ ಕಾರ್ಮಿಕರ ಪೈಕಿ ಇಬ್ಬರು ಮ್ಯಾನ್ಹೋಲ್ಗೆ ಇಳಿದು ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು, ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ಮೇಲೆ ಎತ್ತುವಂತೆ ಕೂಗಿದ್ದರು. ಇವರ ಚೀರಾಟ ಕೇಳಿ ಟ್ರ್ಯಾಕ್ಟರ್ ಚಾಲಕ ಸಹ ಮ್ಯಾನ್‍ಹೋಲ್‍ಗೆ ಇಳಿದಿದ್ದ. ಮೂವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಗುತ್ತಿಗೆದಾರ ಯಾವದೇ ಭದ್ರತಾ ಕ್ರಮಗಳನ್ನು ಕೈಗೊಳ್ಳದೇ ಕಾರ್ಮಿಕರನ್ನು ಮ್ಯಾನ್‍ಹೋಲ್ ಒಳಗೆ ಇಳಿಸಿದ್ದಾರೆ. ಗುತ್ತಿಗೆದಾರನ ನಿಲಕ್ಷ್ರ್ಯದಿಂದ ಪ್ರಾಣಹಾನಿ ಸಂಭವಿಸಿದೆ ಎಂದು ಮೃತ ಕಾರ್ಮಿಕರ ಕುಟುಂಬದವರು ಆರೋಪಿಸಿದ್ದಾರೆ. ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡುವದಾಗಿ ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವದಾಗಿ ಸಚಿವರು ಹೇಳಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.