ಮಡಿಕೇರಿ, ಮಾ. 7: ಮಂಗಳೂರಿನಲ್ಲಿ ಡಿವೈಎಸ್ಪಿ ಯಾಗಿದ್ದ ಕೊಡಗು ಮೂಲದವರಾದ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟಕ್ಕೆ ಇಳಿದಿರುವ ಗಣಪತಿ ಅವರ ತಂದೆ ಕುಶಾಲಪ್ಪ ಹಾಗೂ ಇತರ ಸಂಬಂಧಿಗಳ ಪ್ರಯತ್ನಕ್ಕೆ ಒಂದು ಹಂತದ ಯಶಸ್ಸು ದೊರೆತಿದೆ. ಇಡೀ ರಾಜ್ಯದಲ್ಲಿ ಗಂಭೀರ ಸ್ವರೂಪ ಕಂಡ ಗಣಪತಿ ಸಾವು ಪ್ರಕರಣದ ತನಿಖೆಯ ಹಾದಿಯಲ್ಲಿ ಪೊಲೀಸ್ ಇಲಾಖೆ ಬಿ ಶೀಟ್ ಸಲ್ಲಿಸಿದ್ದು, ಗಣಪತಿ ಅವರ ಪುತ್ರ ನೇಹಾಲ್ ಕೂಡ ಪ್ರಕರಣದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಇದು ತಣ್ಣಗಾಗಿತ್ತು. ಗಣಪತಿ ಪತ್ನಿ ಪಾವನಾ, ಪುತ್ರ ನೇಹಾಲ್ ಹೋರಾಟದಿಂದ ಹಿಂದೆ ಸರಿದ ಕಾರಣ ಈ ಪ್ರಕರಣದಲ್ಲಿ ತಮ್ಮನ್ನು ದೂರುದಾರರಾಗಿ ಪರಿಗಣಿಸುವಂತೆ ಕೋರಿ ಗಣಪತಿ ತಂದೆ ಎಂ.ಕೆ. ಕುಶಾಲಪ್ಪ, ತಾಯಿ ಜಾಜಿ ಪೊನ್ನಮ್ಮ, ಸಹೋದರ ಎಂ.ಕೆ. ಮಾಚಯ್ಯ ಹಾಗೂ ಸೋದರಿ ಸಬಿತ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
7.7.2016 ರಂದು ಗಣಪತಿ ಅವರು ಮಡಿಕೇರಿಯ ಲಾಡ್ಜ್ ವೊಂದರಲ್ಲಿ ಸಾವಿಗೀಡಾಗಿದ್ದರು. ಮಡಿಕೇರಿಯ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಇಂದು ಈ ಅರ್ಜಿಯ ವಿಚಾರಣೆ ನಡೆದಿದ್ದು, ಇವರುಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಿದ್ದು, ಈ ಕುರಿತ ಆದೇಶವನ್ನು ಏಪ್ರಿಲ್ 3ಕ್ಕೆ ಕಾಯ್ದಿರಿಸಿದೆ. ನ್ಯಾಯಾಧೀಶರಾದ ಅನ್ನಪೂರ್ಣ ಅವರ ಎದುರು ಕುಶಾಲಪ್ಪ ಕುಟುಂಬದ ಪರ ಹೈಕೋರ್ಟ್ನ ವಕೀಲ ಪವನ್ ಚಂದ್ರಶೆಟ್ಟಿ ಅವರು ಸುಮಾರು ಅರ್ಧ ತಾಸು ವಾದ ಮಂಡಿಸಿ ಗಮನ ಸೆಳೆದರು. ಹಲವಾರು ವಿಚಾರಗಳನ್ನು ಮುಂದಿಟ್ಟು ಮಂಡಿಸಿದ ವಾದಕ್ಕೆ ಸಮ್ಮತಿಯಿತ್ತ ನ್ಯಾಯಾಧೀಶರು ಅರ್ಜಿ ಪರಿಗಣಿಸುವ ಬಗ್ಗೆ ಏಪ್ರಿಲ್ 3ಕ್ಕೆ ಆದೇಶ ಕಾಯ್ದಿರಿಸಿದ್ದಾರೆ.
ವಕೀಲರ ಪ್ರತಿಕ್ರಿಯೆ
ಬಳಿಕ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ವಕೀಲ ಪವನ್ ಚಂದ್ರ ಶೆಟ್ಟಿ ಅವರು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಗಣಪತಿ ತಂದೆ ಕುಶಾಲಪ್ಪ ಅವರು ಸುಪ್ರೀಂ ಕೋರ್ಟ್ಗೂ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಕೋರ್ಟ್ ಸರಕಾರದಿಂದ ವರದಿ ಕೇಳಿದ್ದು, ಸರಕಾರ ಕಾಲಾವಕಾಶ ಕೇಳಿಕೊಂಡಿದೆ. ಇನ್ನು ಒಂದು ತಿಂಗಳಲ್ಲಿ ಈ ಅರ್ಜಿಯ ವಿಚಾರಣೆ ಅಲ್ಲಿಯೂ ಬರಲಿದೆ ಎಂದರು.
ಗಣಪತಿ ಸಾವಿನ ಸಂದರ್ಭ ಪೊಲೀಸರು ಎಫ್ಐಆರ್ ದಾಖಲಿಸದೆ ಪತ್ನಿಯ ಪುಕಾರನ್ನು ಯುಡಿಆರ್ ಎಂದು ಪರಿಗಣಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದು, ನ್ಯಾಯಾಲಯ ನಿರ್ದೇಶನದ ನಂತರ ಕುಶಾಲನಗರ ಠಾಣೆಯಲ್ಲಿ ಎಫ್ಐಆರ್ ದಾಖ ಲಾಯಿತಾದರೂ ಬಳಿಕ ಬಿ. ಶೀಟ್ ಸಲ್ಲಿಸಲಾಗಿದೆ. ಈ ನಡುವೆ ಗಣಪತಿ ಪುತ್ರ ನೇಹಾಲ್ ಮಡಿಕೇರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಈ ಪ್ರಕರಣವನ್ನು ತಾನು ಮುಂದುವರಿಸುವದಿಲ್ಲ. ನನಗೆ ವಿದ್ಯಾಭ್ಯಾಸಕ್ಕೆ, ಭವಿಷ್ಯಕ್ಕೆ ಇದರಿಂದ ತೊಂದರೆಯಾಗಲಿದೆ. ನ್ಯಾಯಾಲಯಕ್ಕೆ ಅಲೆದಾಡುವದು ಕಷ್ಟವಾಗಲಿದೆ ಎಂಬ ಕಾರಣ ನೀಡಿ ಹಿಂಜರಿದಿದ್ದರು ಎಂದು ವಕೀಲ ಪವನ್ ಚಂದ್ರ ಶೆಟ್ಟಿ ತಿಳಿಸಿ ಈ ವಿಚಾರವನ್ನು ನ್ಯಾಯಾಧೀಶರ ಗಮನಕ್ಕೆ ತಂದಿದ್ದಾಗಿ ಹೇಳಿದರು.
ಕಾನೂನಿನ ಅವಕಾಶದಂತೆ ಕುಟುಂಬದವರನ್ನು ದೂರುದಾರರಾಗಿ ಪರಿಗಣಿಸುವಂತೆ ಗಣಪತಿ ಕುಟುಂಬದ ಪರವಾಗಿ ನ್ಯಾಯಾ ಧೀಶರ ಗಮನ ಸೆಳೆಯಲಾಯಿತು. 2016ರಲ್ಲಿ ಸುಪ್ರೀಂ ಕೋರ್ಟ್ ಪ್ರಕರಣವೊಂದರಲ್ಲಿ ನೀಡಿರುವ ತೀರ್ಪೊಂದನ್ನು ನ್ಯಾಯಾಲಯದ ಮುಂದಿಡಲಾಯಿತು.
ಹೈಕೋರ್ಟ್ನಲ್ಲಿ ಶಂಕರ್ ಹಾಗೂ ರಾಜ್ಯ ಸರಕಾರದ ನಡುವಿನ ಪ್ರಕರಣ, ಸುಪ್ರೀಂಕೋರ್ಟ್ನ ದಾರಿಮಲ್ ಇಂಡಸ್ಟ್ರೀಸ್ ಹಾಗೂ ಕಿಶೋರ್ ವಾದ್ವಾರ್ ಮತ್ತು ಇತರರ ನಡುವಿನ ಪ್ರಕರಣದಲ್ಲಿ ನ್ಯಾಯಾಲಯ ತೊಂದರೆಗೊಳಗಾದವರ ಪರ ತೀರ್ಪು ನೀಡಿದೆ. ಅಲ್ಲದೆ ದೊಡ್ಡ ವ್ಯಕ್ತಿ ಗಳಿಂದ ಪಾಪದವರಿಗೆ ತೊಂದರೆ ಯಾದಲ್ಲಿ ಮ್ಯಾಜಿಸ್ಟ್ರೇಟ್ಗಳು ಅಂತಹ ವರು ಪ್ರಕರಣ ಮುಂದುವರಿಸಲು ಅವಕಾಶ ಮಾಡಿಕೊಡುವಂತೆಯೂ ಉಲ್ಲೇಖ ಮಾಡಿದೆ. ಈ ಎಲ್ಲವನ್ನೂ ನ್ಯಾಯಾಲಯದ ಮುಂದಿಡಲಾಗಿದ್ದು, ಅರ್ಜಿಯನ್ನು ನ್ಯಾಯಾಧೀಶರು ಪರಿಗಣಿಸಿದರು. ಈ ಕುರಿತ ತೀರ್ಪನ್ನು ಏಪ್ರಿಲ್ 3ಕ್ಕೆ ಮುಂದೂಡಲಾಗಿದೆ ಎಂದು ಪವನ್ಚಂದ್ರ ಶೆಟ್ಟಿ ತಿಳಿಸಿದರು.
ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪವನ್ಚಂದ್ರ ಶೆಟ್ಟಿ ಅವರು ಮಂಡಿಸಿದ ಸುದೀರ್ಘ ವಾದವನ್ನು ಇತರ ವಕೀಲರುಗಳು ಕುತೂಹಲದಿಂದ ಕೇಳುತ್ತಿದ್ದುದು ಕಂಡು ಬಂದಿತು.
ದೂರದಾರರಾದ ಗಣಪತಿ ಅವರ ಸಹೋದರ ಎಂ.ಕೆ. ಮಾಚಯ್ಯ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ ನಮ್ಮ ವಕೀಲರು ಸಮರ್ಥ ರೀತಿಯ ವಾದ ಮಂಡಿಸಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ ಎಂದರು. ಬಹುತೇಕ ತಣ್ಣಗಾಗಿದ್ದ ಗಣಪತಿ ಸಾವು ಪ್ರಕರಣ ಇದೀಗ ಮತ್ತೊಮ್ಮೆ ಕೌತುಕ ಸೃಷ್ಟಿಸಿದೆ.