ಕೂಡಿಗೆ, ಮಾ. 7: ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಂಗಾಲ ಗ್ರಾ.ಪಂ.ನ 2017ನೇ ಸಾಲಿನ ಗ್ರಾಮಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮಸ್ಥರುಗಳಾದ ಸಿ.ಎನ್. ಲೋಕೇಶ್, ಶಿವರಾಂ, ಶ್ರೀನಿವಾಸ್, ಶಂಕರ್‍ಮೂರ್ತಿ ಅವರು ವಿದ್ಯುತ್ ಅಳವಡಿಸಿರುವ ಕಂಬಗಳ ಅಂತರವನ್ನು ಸರಿಪಡಿಸಬೇಕು. ಅಲ್ಲದೆ, ಈಗಾಗಲೇ ಬರಗಾಲದ ಛಾಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟ್ರ್ಯಾನ್ಸ್‍ಫಾರಂಗಳನ್ನು ಅನುಕೂಲವಾಗುವ ಸ್ಥಳಗಳಲ್ಲಿ ಅಳವಡಿಸಿ, ಕುಡಿಯುವ ನೀರಿನ ವ್ಯವಸ್ಥೆಗೆ ವಿದ್ಯುತ್ ಒದಗಿಸುವಂತೆ ಆಗ್ರಹಿಸಿದರು. ವಿವಿಧ ಇಲಾಖೆಗಳಿಂದ ಆಗಮಿಸಿರುವ ಅಧಿಕಾರಿಗಳು ತಮ್ಮ ಇಲಾಖೆಗಳ ಮಾಹಿತಿಯನ್ನು ನೀಡಿದರು. ಗ್ರಾಮ ಪಂಚಾಯಿತಿಗಳಿಗೆ ಯೋಜನೆಗಳ ಬಗ್ಗೆ ತಿಳಿಸುವ ವ್ಯವಸ್ಥೆ ಮಾಡಿಕೊಂಡರೆ ಗ್ರಾ.ಪಂ.ನವರು ಗ್ರಾಮಸ್ಥರುಗಳಿಗೆ ತಿಳಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಆಹಾರ ಇಲಾಖೆಯ ತಾಲೂಕಿನ ಅಧಿಕಾರಿ ರಾಜಣ್ಣ ಮಾತನಾಡಿ, ಪಡಿತರ ಚೀಟಿದಾರರು ತಮ್ಮ ಆಧಾರ್ ಕಾರ್ಡ್‍ಗಳನ್ನು ಸಮರ್ಪಕವಾಗಿ ನೋಂದಾಯಿಸಿದಲ್ಲಿ ಯಾವದೇ ರೀತಿಯ ಕಾರ್ಡ್ ರದ್ದತಿ ಆಗುವದಿಲ್ಲ. ಆದ್ದರಿಂದ ಗ್ರಾಮಸ್ಥರು ಆಧಾರ್ ಕಾರ್ಡ್‍ಗಳನ್ನು ನ್ಯಾಯಬೆಲೆ ಅಂಗಡಿಗಳಿಗೆ ನೀಡುವ ಮೂಲಕ ತಮ್ಮ ಪಡಿತರ ಚೀಟಿಗಳಿಂದ ಪಡಿತರ ವಸ್ತುಗಳನ್ನು ಪಡೆಯಬೇಕು ಎಂದರು.

ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಹೆಚ್.ಆರ್. ಶ್ರೀನಿವಾಸ್ ಪಡಿತರ ವ್ಯವಸ್ಥೆಯಲ್ಲಿ ಆಗಿರುವ ದೋಷಗಳನ್ನು ಸರಿಪಡಿಸಿಕೊಡುವಂತೆ ಅಧಿಕಾರಿಗೆ ಸೂಚನೆ ನೀಡಿದರು.

ಗ್ರಾಮ ಸಭೆಯಲ್ಲಿ ತಾ.ಪಂ. ಸದಸ್ಯ ಎನ್.ಎಸ್. ಜಯಣ್ಣ, ಉಪಾಧ್ಯಕ್ಷೆ ಪೂರ್ಣಿಮಾ, ಸದಸ್ಯರುಗಳಾದ ಎಸ್.ಸಿ. ರಘು, ಲಕ್ಷಿ, ಮಂಜುನಾಥ್, ವೀರಭದ್ರಪ್ಪ, ದಿವ್ಯ, ಶೃತಿ, ಗೀತಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಸೇರಿದಂತೆ ಗ್ರಾಮಸ್ಥರು ಇದ್ದರು.