ಕುಶಾಲನಗರ, ಮಾ. 7: ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಆಕ್ಷೇಪಣಾ ವರದಿ ಸಲ್ಲಿಸದ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟ ವ್ಯಾಪ್ತಿಯ ಹಾಗೂ ರಾಜ್ಯದ ಜನತೆಯ ಹಿತಾಸಕ್ತಿಯನ್ನು ಕಾಪಾಡಲು ಸಂಪೂರ್ಣ ವಿಫಲವಾಗಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದ್ದಾರೆ.
ಕೇಂದ್ರ ಸರಕಾರ ರಾಜ್ಯದ ಪಶ್ಚಿಮಘಟ್ಟ ಪ್ರದೇಶದ ನೂರಾರು ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿ ಅಧಿಸೂಚನೆ ಹೊರಡಿಸಿರುವ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು ಈ ಸಂಬಂಧ ಕೇರಳ ಸರಕಾರ ಸಂಪೂರ್ಣ ಮಾಹಿತಿ ಒದಗಿಸಿದ ಹಿನ್ನೆಲೆಯಲ್ಲಿ ಆ ವ್ಯಾಪ್ತಿಯನ್ನು ಕೇಂದ್ರ ಕೈಬಿಟ್ಟಿರುವದು ಕಾಣಬಹುದು. ಆದರೆ ರಾಜ್ಯ ಸರಕಾರ ಮಾತ್ರ ಕೇಂದ್ರದ ಕರಡು ಅಧಿಸೂಚನೆ ಮೇಲೆ ಯಾವದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರಕಾರ ಸತತವಾಗಿ 3 ಬಾರಿ ಕರಡು ಅಧಿಸೂಚನೆಗಳನ್ನು ಹೊರಡಿಸಿದ್ದು ಕರ್ನಾಟಕ ಸರಕಾರ ಮಾತ್ರ ಮೌನ ತಾಳಿತ್ತು ಎಂದು ಅವರು ಆರೋಪಿಸಿದ್ದಾರೆ. ಇದೀಗ ಪಶ್ಚಿಮಘಟ್ಟ ವಲಯದ ರೈತರು, ಜನತೆಗೆ ರಾಜ್ಯ ಸರಕಾರ ದ್ರೋಹ ಬಗೆದಂತಾಗಿದೆ ಎಂದು ತಿಳಿಸಿರುವ ಅವರು, ಇನ್ನಾದರೂ ಈ ಬಗ್ಗೆ ದೃಢ ನಿಲುವು ತಾಳುವದರೊಂದಿಗೆ ಈ ಭಾಗದ ರೈತರ ಹಿತ ಕಾಪಾಡಬೇಕಾ ಗಿದೆ ಎಂದು ಒತ್ತಾಯಿಸಿದ್ದಾರೆ.