ಮಡಿಕೇರಿ, ಮಾ.7 :ತುಳು ಬಾಂಧವರು ತುಳು ಭಾಷೆ ಮತ್ತು ಸಂಸ್ಕøತಿಯನ್ನು ಪ್ರೀತಿಸುವದರೊಂದಿಗೆ ಇತರರ ಭಾಷೆ, ಸಂಸ್ಕøತಿಯನ್ನು ಕೂಡ ಗೌರವಿಸಬೇಕೆಂದು ತುಳುವೆರ ಜನಪದ ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ ಕರೆ ನೀಡಿದ್ದಾರೆ. ತುಳುವೆರ ಜನಪದ ಕೂಟದ ಮಡಿಕೇರಿ ತಾಲ್ಲೂಕು ವ್ಯಾಪ್ತಿಯ ಕಡಗದಾಳು ವಲಯ ಮಟ್ಟದ ಸಭೆ ಕಡಗದಾಳು ಸರಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪಿ.ಎಂ.ರವಿ ಕೊಡಗು ಜಿಲ್ಲೆ ಸಾಮರಸ್ಯಕ್ಕೆ ಹೆಸರಾಗಿದ್ದು, ತುಳುವೆರ ಜನಪದ ಕೂಟ ರಾಜಕೀಯ ಮತ್ತು ಜಾತೀಯ ವಿಚಾರದಿಂದ ದೂರ ಉಳಿಯಲಿದೆ ಎಂದರು. ತುಳು ಬಾಂಧವರು ಅಧಿಕ ಸಂಖ್ಯೆಯಲ್ಲಿದ್ದು, ತಮ್ಮ ಬದುಕನ್ನು ತುಳು ಸಂಪ್ರದಾಯದಂತೆ ನಡೆಸಿಕೊಂಡು ಹೋಗುತ್ತಿದ್ದಾರೆ. ಭಾಷೆ, ಸಾಹಿತ್ಯ, ಸಂಸ್ಕøತಿಯ ಬೆಳವಣಿಗೆಗೆ ಜನಪದ ಕೂಟ ಶ್ರಮಿಸುತ್ತಿದ್ದು, ಪ್ರತಿಯೊಬ್ಬರೂ ಸಂಘಟನೆಯೊಂದಿಗೆ ಕೈ ಜೋಡಿಸಬೇಕೆಂದು ರವಿ ಕರೆ ನೀಡಿದರು.
ಜಿಲ್ಲಾ ಭಂಟರ ಸಂಘದ ಅಧ್ಯಕ್ಷ ಹಾಗೂ ಕೂಟದ ಉಪಾಧ್ಯಕ್ಷ ನಾರಾಯಣ ರೈ ಮಾತನಾಡಿ ಪ್ರತಿ ಗ್ರಾಮ ಮಟ್ಟದಲ್ಲಿ ಕೂಟವನ್ನು ಸಂಘಟಿಸುವ ಗುರಿ ಹೊಂದಿದ್ದು, ಎಲ್ಲಾ ತುಳು ಭಾಷಿಕರು ಸ್ವಯಂ ಪ್ರೇರಿತರಾಗಿ ಸದಸ್ಯತ್ವವನ್ನು ಪಡೆದುಕೊಳ್ಳಬೇಕೆಂದರು.
ಕೂಟದ ಜಿಲ್ಲಾ ಸಲಹೆಗಾರ ಎನ್.ಡಿ.ನಾಣಯ್ಯ ಮಾತನಾಡಿ, ತುಳು ಬಾಂಧವರು ನ್ಯಾಯ, ಧರ್ಮ, ನಿಷ್ಠೆಯೊಂದಿಗೆ ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಗುಣ ಹೊಂದಿದ್ದಾರೆ. ಇದೇ ಕಾರಣಕ್ಕೆ ಇಂದಿಗೂ ತುಳು ಭಾಷೆ ಹೆಚ್ಚು ಶ್ರೀಮಂತವಾಗಿ ಉಳಿದುಕೊಂಡಿದೆ ಎಂದು ಅಭಿಪ್ರಾಯಪಟ್ಟರು.
ಮಡಿಕೇರಿ ತಾಲೂಕು ತುಳುವೆರ ಜನಪದ ಕೂಟದ ಅಧ್ಯಕ್ಷ ಪ್ರಭು ರೈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗೌರವ ಸಲಹೆಗಾರ ಐತ್ತಪ್ಪ ರೈ ಮತ್ತು ಭಂಟರ ಸಂಘದ ತಾಲೂಕು ಅಧ್ಯಕ್ಷ ರಮೇಶ್ ರೈ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ತುಳುವೆರ ಜನಪದ ಕೂಟದ ತಾಲೂಕು ಉಪಾಧ್ಯಕ್ಷ ಸುರೇಶ್ ಕುಲಾಲ್, ನಿರ್ದೇಶಕ ಲಕ್ಷ್ಮೀ ಪ್ರಸಾದ್ ಪೆರ್ಲ, ಕಡಗದಾಳು ಗ್ರಾ.ಪಂ. ಸದಸ್ಯೆ ಪ್ರತಿಮ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ತಾಲೂಕು ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಎಸ್ ಜಯಪ್ಪ ನಿರೂಪಿಸಿದರು.