ಪೊನ್ನಂಪೇಟೆ, ಮಾ. 7: ನೋಟು ಅಮಾನೀಕರಣದಿಂದ ದೇಶ ಆರ್ಥಿಕವಾಗಿ ಕುಸಿದಿದೆ. ಇದರಿಂದ ಜನ ಸಾಮಾನ್ಯರು ಸಮಸ್ಯೆಗೆ ಸಿಲುಕಿ ತಮ್ಮ ದೈನಂದಿನ ಬದುಕಿನಲ್ಲಿ ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಎಐಸಿಸಿ ವೀಕ್ಷಕಿ ಉಷಾ ನಾಯ್ಡು ಹೇಳಿದರು.
ನೋಟು ಅಮಾನೀಕರಣದ ವಿರುದ್ಧ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ನಿಂದ ಆಯೋಜಿಸಿದ್ದ ‘ಜನಾವೇದನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನೋಟ್ ರದ್ಧತಿಗೊಂಡ 60 ದಿನದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೊಳಿಸುತ್ತೇನೆ ಎಂದು ಭರವಸೆ ನೀಡಿದ್ದ ಪ್ರಧಾನಿ ಮೋದಿಗೆ ಇನ್ನೂ ಪರಿಸ್ಥಿತಿಯನ್ನು ಸಮತೋಲನಕ್ಕೆ ತರಲು ಸಾಧ್ಯವಾಗಿಲ್ಲ. ಇದರಿಂದ ಸಾಮಾನ್ಯ ವರ್ಗ ಸಮಸ್ಯೆಗೆ ಸಿಲುಕಿದೆ ಎಂದರು.
ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಮಾತನಾಡಿ, ಅಧಿಕಾರಕ್ಕೆ ಬರುವ ಸಂದರ್ಭ ಜನ್ ಧನ್ ಖಾತೆಗೆ ರೂ. 15 ಲಕ್ಷ ಠೇವಣಿ ಇಡುತ್ತೇವೆ ಎಂದು ಹೇಳಿದ್ದ ಬಿಜೆಪಿ ಸರ್ಕಾರದ ಆಶ್ವಾಸನೆ ಇನ್ನೂ ಈಡೇರಿಲ್ಲ. ರೈತಾಪಿ ವರ್ಗಕ್ಕೆ ನೋಟ್ ಅಮಾನ್ಯದಿಂದ ತೊಂದರೆಯಾಗಿದೆ. ಗೊಬ್ಬರಕ್ಕೆ ಸಬ್ಸಿಡಿ ನೀಡದಿರಲು ಕಾರಣವೇನು ಎಂದು ಪ್ರಶ್ನಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ, ಭಾರತ ದೇಶ ಕೃಷಿ ಅವಲಂಭಿತ ವಾಗಿದ್ದು ನೋಟು ಅಮಾನ್ಯದಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಎಟಿಎಂಗಳಲ್ಲಿ ಶೇ 2 ಸೇವಾ ತೆರಿಗೆ ವಿದಿಸುವ ಮೂಲಕ ಬೊಕ್ಕಸ ತುಂಬಿಸಿ ಕೊಳ್ಳುತ್ತಿರುವ ಕೇಂದ್ರ ಸರ್ಕಾರ ಆ ಹಣವನ್ನು ಜನಪರ ಕಾರ್ಯಕ್ಕೆ ಬಳಸುತ್ತಿಲ್ಲ ಎಂದು ಆರೋಪಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಅವರು ಮಾತನಾಡಿ, ದಿಢೀರನೆ ನೋಟು ಅಮಾನ್ಯಗೊಳಿಸಿದ ಕಾರಣ ಭಾರತದಲ್ಲಿ ಅಭದ್ರತೆ ಕಾಡ ತೊಡಗಿದೆ ಎಂದರು.
ಕಾಂಗ್ರೆಸ್ ಮುಖಂಡ ತಿತಿಮತಿಯ ವಿಲ್ಸನ್ ಮಾತನಾಡಿ, ನೋಟು ಅಮಾನೀಕರಣದಿಂದ ಸಹಕಾರ ಸಂಘಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಚ್ಚೇ ದಿನ್ ಬರುತ್ತದೆ ಎಂದು ಹೇಳುವ ಬಿಜೆಪಿ ಸರ್ಕಾರದ ಸಾಧನೆ ಶೂನ್ಯ ಎಂದರು.
ಈ ಸಂದರ್ಭ ಕಾಂಗ್ರೆಸ್ ಪ್ರಬಾರ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಎ. ಯಾಕೂಬ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್ ರೆಹಮಾನ್ ಬಾಪು, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕಾಡ್ಯಮಾಡ ಚೇತನ್, ಪೊನ್ನಂಪೇಟೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮತ್ರಂಡ ದಿಲ್ಲು, ಗ್ರಾ.ಪಂ. ಅಧ್ಯಕ್ಷೆ ಮೂಕಳೆರ ಸುಮಿತಾ ಇದ್ದರು. ಕಾಂಗ್ರೆಸ್ ಮುಖಂಡ ಸರಾ ಚಂಗಪ್ಪ ವಂದಿಸಿದರು.