ಸಿದ್ದಾಪುರ, ಮಾ. 7: ರಾಜ್ಯ ಎಸ್‍ಎಸ್‍ಎಫ್ ಸಂಘಟನೆ ವತಿಯಿಂದ ರಾಜ್ಯದಾದ್ಯಂತ ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು ಮಾಹಿತಿ ನೀಡಲಾಗುತ್ತಿದೆ.

ಜಿಲ್ಲೆಯ ವಿವಿಧೆಡೆ ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದ್ದು,ಎಸ್‍ಎಸ್‍ಎಫ್ ನೆಲ್ಲಿಹುದಿಕೇರಿ ಶಾಖಾ ವತಿಯಿಂದ ನೆಲ್ಲಿಹುದಿ ಕೇರಿಯ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.

ಸುಮಾರು 30ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುವ ಬಗ್ಗೆ ಮಾಹಿತಿ ಪಡೆದುಕೊಂಡರು. ಎಸ್‍ಎಸ್‍ಎಫ್‍ನ ಪ್ರಮುಖರಾದ ಯಾಕೂಬ್ ಮಾಸ್ಟರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಅವರಲ್ಲಿ ಧೈರ್ಯ ತುಂಬುವ ಹಾಗೂ ಉತ್ತಮ ಶಿಕ್ಷಣದ ಮೂಲಕ ಅವರನ್ನು ಸುಶಿಕ್ಷಿತರನ್ನಾಗಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಲು ಎಸ್‍ಎಸ್‍ಎಫ್ ಸಂಘಟನೆ ರಾಜ್ಯಾದ್ಯಂತ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ಶಾಲೆಯ ಪ್ರಮುಖರಾದ ಜಿಮ್ಮಿ ಸಿಕ್ವೇರಾ ಮಾತನಾಡಿ, ಪರೀಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ತುಂಬಲು ಎಸ್‍ಎಸ್‍ಎಫ್ ಸಂಘಟನೆ ಹಮ್ಮಿಕೊಂಡಿರುವ ಇಂತಹ ಕಾರ್ಯಕ್ರಮ ಶ್ಲಾಘನೀಯವೆಂದರು.

ಈ ಸಂದರ್ಭ ಎಸ್‍ಎಸ್‍ಎಫ್ ಸಂಘಟನೆಯ ಪ್ರಮುಖರಾದ ಸಲೀಂ, ರಫೀಕ್, ಮುಸ್ತಫಾ, ಜುನೈದ್ ಮತ್ತಿತರರು ಹಾಜರಿದ್ದರು.