ಮಡಿಕೇರಿ, ಮಾ. 7: ಪ್ರಜಾಪ್ರಭುತ್ವಕ್ಕೆ ಅರ್ಥ ಬರಬೇಕಾದರೆ ಬಹುಜನರಿಗೆ ಮನ್ನಣೆ ದೊರೆಯ ಬೇಕಾದ ಅಗತ್ಯವಿದೆ ಎಂದು ಬಹುಜನ ವಿದ್ಯಾರ್ಥಿ ಸಂಘದ ರಾಜ್ಯ ಸಂಯೋಜಕ ಡಾ. ಶಿವಕುಮಾರ್ ಹೇಳಿದರು. ನಗರದ ಬಾಲಭವನದಲ್ಲಿ ಬಹುಜನ ವಿದ್ಯಾರ್ಥಿ ಸಂಘದ ವತಿಯಿಂದ ನಡೆದ ಬಡ್ತಿ ಮೀಸಲಾತಿ ವಿಚಾರ ಸಂಕಿರಣ ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹೆಸರಿಗೆ ಮಾತ್ರ ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ವಾಸ್ತವವಾಗಿ ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ ಎಂದು ಶಿವಕುಮಾರ್ ಆರೋಪಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕ ಎಸ್.ಎ. ಮುರುಳೀಧರ್ ಮಾತನಾಡಿ, ಶೋಷಿತ ವರ್ಗ ಶೈಕ್ಷಣಿಕ ಮತ್ತು ರಾಜಕೀಯವಾಗಿ ಮುಂದೆ ಬಂದಾಗ ಅಭಿವೃದ್ಧಿ ಸಾಧ್ಯ. ಶೋಷಿತ ವರ್ಗದ ಜನತೆ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉನ್ನತ ಹುದ್ದೆಗಳನ್ನು ಪಡೆಯುವಂತಾಗಬೇಕು. ಪತ್ರಿಕೆಗಳನ್ನು ಓದುವ ಮೂಲಕ ಜ್ಞಾನವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು. ಅಧ್ಯಕ್ಷತೆಯನ್ನು ಮೈಸೂರಿನ ಇಂಜಿನಿಯರ್ ಶಿವಪ್ರಸಾದ್ ವಹಿಸಿದ್ದರು. ಪರಿವರ್ತನಾ ಕಲಾ ತಂಡ ಪ್ರಾರ್ಥಿಸಿ, ಅರ್ಜುನ್ ಸ್ವಾಗತಿಸಿದರು. ಈ ಸಂದರ್ಭ ಸಾಮಾನ್ಯ ಜ್ಞಾನ ಸ್ಪರ್ಧಾ ವಿಭಾಗದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.