ಮಡಿಕೇರಿ, ಮಾ. 7: ನಗರದ ಸಾರಿಗೆ ಇಲಾಖೆಯಲ್ಲಿ ಕಳೆದ 7 ವರ್ಷ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಸೇವೆ ಸಲ್ಲಿಸಿ ವಯೋ ನಿವೃತರಾದ ಎಸ್.ವಿ. ರಾಮನಾಥ್ ಅವರಿಗೆ ಸಾರಿಗೆ ಇಲಾಖೆ ಕಚೇರಿಯಲ್ಲಿ ಸಾರಿಗೆ ಅಧಿಕಾರಿಗಳು, ಸಿಬ್ಬಂದಿ ವರ್ಗ, ಚಾಲಕ ತರಬೇತಿ ಒಕ್ಕೂಟದ ವತಿಯಿಂದ ಬೀಳ್ಕೊಡುಗೆ ಸಮಾರಂಭ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಾರಿಗೆ ಅಧಿಕಾರಿ ಫೆಲೆಕ್ಸ್ ಡಿಸೋಜ ಮಾತನಾಡಿ, ಮಡಿಕೇರಿ ಕಚೇರಿಯಲ್ಲಿ 5 ಮೋಟಾರು ನಿರೀಕ್ಷಕರ ಹುದ್ದೆ ಇರಬೇಕಾದಲ್ಲಿ ಇಬ್ಬರು ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಎಸ್.ವಿ.ರಾಮನಾಥ್ ಅವರು ಈ ಕಚೇರಿಯ ಆಧಾರ ಸ್ಥಂಭವಾಗಿದ್ದರು ಎಂದರು.

ರಾಮನಾಥ್ ಅವರು ತಮ್ಮ ಸೇವಾ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರಿಂದ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಗು ಜಿಲ್ಲಾ ಆಡಳಿತದಿಂದ ನೀಡಲ್ಪಟ್ಟಿದೆ ಎಂದರು. ಹಾಗೆಯೇ ರಾಜ್ಯಮಟ್ಟದ ಹಲವು ಪ್ರಶಸ್ತಿಗಳು ಇವರಿಗೆ ದೊರಕಿದೆ ಎಂದು ಅವರು ಸ್ಮರಿಸಿದರು.

ಸನ್ಮಾನ ಸ್ವೀಕರಿಸಿ ರಾಮನಾಥ್ ಮಾತನಾಡಿ, ಸರಕಾರಿ ಕೆಲಸ ದೇವರ ಕೆಲಸ ಎಂಬ ತತ್ವವನ್ನು ಅಳವಡಿಸಿಕೊಂಡು 34 ವರ್ಷ ಸಾರಿಗೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಒಟ್ಟು 7 ಜಿಲ್ಲೆಯ ಕಚೇರಿಗಳಲ್ಲಿ ಸೇವೆ ಸಲ್ಲಿಸಿದ್ದೇನೆ ಎಂದರು.

ಅಧೀಕ್ಷಕ ಶಿವಣ್ಣ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚಾಲನಾ ತರಬೇತಿ ಒಕ್ಕೂಟದ ಅಧ್ಯಕ್ಷ ಗಿಲ್ಬರ್ಟ್ ಲೋಬೋ, ಮೋಟಾರು ನಿರೀಕ್ಷಕ ಶಿವಕುಮಾರ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ಫೆಲಿಕ್ಸ್ ಡಿಸೋಜ ವಹಿಸಿದ್ದರು. ವೇದಿಕೆಯಲ್ಲಿ ಅಧೀಕ್ಷಕ ಶಿವಣ್ಣ, ಮೋಟಾರು ನಿರೀಕ್ಷಕ ಶಿವಕುಮಾರ್, ಸಾರಿಗೆ ಅಧೀಕ್ಷಕಿ ಸಲೀಮಾ, ಲೆಕ್ಕ ಅಧೀಕ್ಷಕ ಬಾಬು ಉಪಸ್ಥಿತರಿದ್ದರು.