ಸೋಮವಾರಪೇಟೆ, ಮಾ. 7: ಸಮೀಪದ ಬೇಳೂರು ಗ್ರಾ. ಪಂ. ವ್ಯಾಪ್ತಿಯ ಕರ್ಕಳ್ಳಿ ಬಾಣೆಯಲ್ಲಿ ಬೈಕ್ನಲ್ಲಿ ಗ್ರಾಮ ಸಂಚಾರ ನಡೆಸಿದ ಶಾಸಕ ಅಪ್ಪಚ್ಚು ರಂಜನ್ ಅವರು, ಗ್ರಾಮದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಗಳನ್ನು ಮುಂದಿನ 15 ದಿನಗಳೊಳಗೆ ಪರಿಹರಿಸುವಂತೆ ಸಂಬಂಧಿಸಿದ ಇಂಜಿನಿಯರ್ಗೆ ಸೂಚಿಸಿದರು.
ಕರ್ಕಳ್ಳಿ ಬಾಣೆಯಲ್ಲಿ ಕಳೆದ ಹಲವು ವರ್ಷಗಳ ಹಿಂದೆ ನಿರ್ಮಿಸಿದ್ದ ನೀರು ಸಂಗ್ರಹಣೆಯ ಎರಡು ಟ್ಯಾಂಕ್ಗಳಿದ್ದು, ಎರಡೂ ಟ್ಯಾಂಕ್ ಗಳಲ್ಲಿ ನೀರು ಶೇಖರಣೆಗೊಳ್ಳದೆ ನೀರು ಸರಬರಾಜು ಮಾಡಲು ಕಷ್ಟಕರವಾಗಿದೆ. ಓವರ್ಹೆಡ್ ಟ್ಯಾಂಕ್ ನಿರ್ಮಿಸಬೇಕೆಂದು ಅಲ್ಲಿನ ನಿವಾಸಿಗಳು ಶಾಸಕ ಅಪ್ಪಚ್ಚು ರಂಜನ್ ಅವರಲ್ಲಿ ಮನವಿ ಮಾಡಿದರು.
ಶಾಸಕರು ಹಾಲಿ ಇದ್ದ ಟ್ಯಾಂಕ್ನ ಸ್ಥಿತಿಗತಿಗಳನ್ನು ಪರಿಶೀಲಿಸಿದ ಸಂದರ್ಭ ಬಹಳ ಹಳೆಯದಾದ 50 ಸಾವಿರ ಲೀಟರ್ ನೀರು ಸಂಗ್ರಹವಾಗಬಲ್ಲ ನೀರಿನ ಟ್ಯಾಂಕ್ನ ಗೋಡೆಗಳಲ್ಲಿ ನೀರು ಸೋರಿಕೆ ಯಾಗುತ್ತಿದ್ದುದನ್ನು ಪರಿಶೀಲಿಸಿದ ಶಾಸಕರು, ದುರಸ್ತಿಪಡಿಸುವಂತೆ ಅಭಿಯಂತರ ವೀರೇಂದ್ರ ಅವರಿಗೆ ಸೂಚಿಸಿದರು.
ಕರ್ಕಳ್ಳಿಯ ಸ್ಮಶಾನಕ್ಕೆ ತೆರಳುವ ರಸ್ತೆ ಬದಿಯಲ್ಲಿ ತೆರೆಯಲಾಗಿರುವ ಕೊಳವೆಬಾವಿಗೆ ತಕ್ಷಣ ಮೋಟಾರ್ ಅಳವಡಿಸಲು ಸೂಚಿಸಿದರು.
ಇದೇ ಸಂದರ್ಭ ಹಿಂದುಳಿದ ವರ್ಗಕ್ಕೆ ಸೇರಿದ ಸ್ಮಶಾನದಲ್ಲಿ ಚಿತಾಗಾರವನ್ನು ನಿರ್ಮಿಸಲು ಬಹಳ ವರ್ಷಗಳ ಹಿಂದೆ ಪಿಲ್ಲರ್ ಹಾಕಿ ಹಾಗೆಯೇ ಇರುವ ಬಗ್ಗೆ ಮಾಹಿತಿ ಪಡೆದ ಶಾಸಕರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಅದರ ಕಾಮಗಾರಿಯನ್ನು ಮತ್ತೆ ಕೈಗೆತ್ತಿಕೊಳ್ಳಲು ಅನುದಾನದ ಬಗ್ಗೆ ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರ ರೊಂದಿಗೆ ಚರ್ಚಿಸಿ, ಮುಂದಿನ ದಿನಗಳಲ್ಲಿ ಕಾಮಗಾರಿ ಪೂರ್ಣ ಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಈ ಸಂದರ್ಭ ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯ ಮಂಜುನಾಥ್, ವಾರ್ಡ್ ಸದಸ್ಯರು ಗಳಾದ ಯೋಗೇಂದ್ರ, ಸುಭದ್ರಕುಮಾರಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಚನ್ನಕೇಶವ, ಗ್ರಾಮದ ಪ್ರಮುಖರು ಗಳಾದ ಹುಲ್ಲೂರಿಕೊಪ್ಪ ಚಂದ್ರ, ಹರೀಶ್, ಗಣೇಶ್, ರುಕ್ಮಯ್ಯ, ಚಂದ್ರಶೇಖರ್ ಸೇರಿದಂತೆ ಪ್ರಮುಖರು ಇದ್ದರು.