ಮಡಿಕೇರಿ, ಮಾ. 7: ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಸ್ಟಾಫ್ ಕ್ರಿಕೆಟ್ ಟೂರ್ನಮೆಂಟ್‍ನಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ತಂಡ ಫೈನಲ್ ಪಂದ್ಯದಲ್ಲಿ ವೀರಾಜಪೇಟೆಯ ಸಂತ ಅನ್ನಮ್ಮ ಕಾಲೇಜು ತಂಡವನ್ನು 24 ರನ್ನುಗಳ ಅಂತರದಿಂದ ಸೋಲಿಸುವ ಮೂಲಕ ಚಾಂಪಿಯನ್ ಪಟ್ಟ ಮುಡಿಗೇರಿಸಿ ಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಾವೇರಿ ಕಾಲೇಜು ನಿಗದಿತ 10 ಓವರ್‍ಗಳಲ್ಲಿ ತಂಡದ ನಾಯಕ ಉದಿಯಂಡ ಪೆಮ್ಮಯ್ಯ ಭಾರಿಸಿದ ಆಕರ್ಷಕ ಅಜೇಯ ಅರ್ಧ ಶತಕ (54) ನೆರವಿನಿಂದ 3 ವಿಕೆಟ್ ನಷ್ಟಕ್ಕೆ 109 ರನ್ನುಗಳ ಉತ್ತಮ ಮೊತ್ತ ಕಲೆ ಹಾಕಿತು. ಕಾವೇರಿ ಕಾಲೇಜು ತಂಡದ ಮಂಡಂಗಡ ಕುಶಾಲಪ್ಪ (24) ಶ್ರೀಧರ್ (20) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಗೆಲುವಿಗೆ 110 ರನ್ ಗುರಿ ಪಡೆದ ಸಂತ ಅನ್ನಮ್ಮ ಕಾಲೇಜು ತಂಡದ ಆರಂಭಿಕ ಆಟಗಾರರಾದ ಹೇಮಂತ್ ಹಾಗೂ ಶರತ್ ಉತ್ತಮ ಜೊತೆಯಾಟದ ಮೂಲಕ ಕಾವೇರಿ ಕಾಲೇಜು ತಂಡಕ್ಕೆ ಆತಂಕ ಮೂಡಿಸಿದ್ದರು.

ಬೊಟ್ಟಂಗಡ ಕಾರ್ಯಪ್ಪ ಉತ್ತಮ ಎಸೆತದಲ್ಲಿ ಶರತ್ ವಿಕೆಟ್ ಪಡೆದು ಗೆಲುವಿನ ಆಸೆ ಚಿಗುರಿಸಿದರು. ಶ್ರೀಧರ್ ತಮ್ಮ ಒಂದೇ ಓವರ್‍ನಲ್ಲಿ 3 ವಿಕೆಟ್ ಪಡೆದು ಎದುರಾಳಿ ತಂಡಕ್ಕೆ ಭರ್ಜರಿ ಹೊಡೆತ ನೀಡಿದರು. ಅಂತಿಮವಾಗಿ ಸಂತ ಅನ್ನಮ್ಮ ಕಾಲೇಜು ನಿಗದಿತ 10 ಓವರ್ ಮುಕ್ತಾಯಕ್ಕೆ 85 ರನ್ ಗಳಿಸುವ ಮೂಲಕ ಸೋಲೊಪ್ಪಿ ಕೊಂಡು ರನ್ನರ್ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ವೀರಾಜಪೇಟೆ ಕಾವೇರಿ ಕಾಲೇಜು ತಂಡ ಮೂರನೇ ಸ್ಥಾನ ಪಡೆದು ಕೊಂಡಿತು. ಸರಣಿಯುದ್ದಕ್ಕೂ ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡಿದ ಗೋಣಿಕೊಪ್ಪ ಕಾವೇರಿ ಕಾಲೇಜು ತಂಡದ ಪೆಮ್ಮಯ್ಯ ಸರಣಿ ಶ್ರೇಷ್ಠ ಹಾಗೂ ಉತ್ತಮ ಬ್ಯಾಟ್ಸ್ ಮನ್ ಪ್ರಶಸ್ತಿ ಪಡೆದುಕೊಂಡರು.

ಸಂತ ಅನ್ನಮ್ಮ ತಂಡದ ನಾಯಕ ಹೇಮಂತ್ ಪಂದ್ಯ ಪುರುಷೋತ್ತಮ ಹಾಗೂ ವೀರಾಜಪೇಟೆ ಕಾವೇರಿ ಕಾಲೇಜಿನ ಆದೇಂಗಡ ಕುಶಾಲಪ್ಪ ಉತ್ತಮ ಎಸೆತಗಾರ ಪ್ರಶಸ್ತಿ ಪಡೆದು ಕೊಂಡರು.

ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ ಬಹುಮಾನ ವಿತರಿಸಿದರು. ಈ ಸಂದರ್ಭ ಎನ್.ಸಿ.ಸಿ. ಆಫೀಸರ್ ಮೇಜರ್ ರಾಘವ್, ದೈಹಿಕ ನಿರ್ದೇಶಕರಾದ ಪವನ್ ಮತ್ತು ರಮೇಶ್ ಉಪಸ್ಥಿತರಿದ್ದರು.