ಸೋಮವಾರಪೇಟೆ, ಮಾ. 7: ರಸ್ತೆ ದುರಸ್ತಿಗೆ ಆಗ್ರಹಿಸಿ ಕರ್ಕಳ್ಳಿ ಸಮೀಪದದಲ್ಲಿ ರಸ್ತೆ ತಡೆ ಮಾಡುವ ಮೂಲಕ ಬೇಳೂರು ಹಾಗೂ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪಟ್ಟಣದಿಂದ ಸೀಗಲುಡುವೆ-ಕುಸುಬೂರು ಮಾರ್ಗವಾಗಿ ಕುಶಾಲನಗರ ರಸ್ತೆಯನ್ನು ಸಂಪರ್ಕಿಸುವ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು ವಾಹನ ಸಂಚಾರ ಸೇರಿದಂತೆ ಪಾದಚಾರಿಗಳು ನಡೆಯಲೂ ಅಸಾಧ್ಯವಾದ ಸ್ಥಿತಿಗೆ ತಲಪಿದೆ. ಕೂಡಲೇ ರಸ್ತೆಯನ್ನು ದುರಸ್ತಿಪಡಿಸಿ ಎಂದು ಕುಸುಬೂರು, ಹಳ್ಳದಿಣ್ಣೆ, ಕೆಂಚಮ್ಮನಬಾಣೆ, ಕರ್ಕಳ್ಳಿ, ಹುಲ್ಲೂರಿಕೊಪ್ಪ ಸೇರಿದಂತೆ ವಿವಿಧ ಗ್ರಾಮದ ಜನತೆ ಮಹಿಳೆ- ಪುರುಷರೆನ್ನದೆ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರೊಂದಿಗೆ ತೆರಳಿ ರಸ್ತೆಯನ್ನು ಪರಿಶೀಲಿಸಿದÀ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಅಭಿಯಂತರ ಜಯರಾಂ ಅವರು, ರಸ್ತೆಯನ್ನು ನಬಾರ್ಡ್ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಲು ಅಂದಾಜು ಪಟ್ಟಿ ತಯಾರಿಸಿ ಕಳುಹಿಸಿಕೊಡಲಾಗಿದೆ. ಅನುದಾನ ಬಂದ ಕೂಡಲೇ ರಸ್ತೆ ಕಾಮಗಾರಿ ನಡೆಸಲಾಗುವದು ಎಂದರು. ಸಂಪೂರ್ಣ ಕಿತ್ತುಹೋದ ಜಾಗವಾದ ಸುಮಾರು 300 ಮೀಟರ್ ರಸ್ತೆ ನಿರ್ಮಾಣ ಹಾಗೂ ಉಳಿದೆಡೆಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ಮಾಡಲಾಗುವದು ಎಂದು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ರಸ್ತೆ ಪರಿಶೀಲಿಸಿದ ಶಾಸಕ ಅಪ್ಪಚ್ಚು ರಂಜನ್, ಗ್ರಾಮದ ಪ್ರಮುಖರುಗಳೊಂದಿಗೆ ಮಾತನಾಡಿ, ಈ ರಸ್ತೆ ಸೇರಿದಂತೆ ತಾಲೂಕಿನ ಕೆಲವು ರಸ್ತೆಗಳ ಅಭಿವೃದ್ಧಿಗಾಗಿ ಕ್ರಿಯಾಯೋಜನೆ ತಯಾರಿಸಿ ಸಂಬಂಧಪಟ್ಟ ಇಲಾಖೆಗೆ ಕಳುಹಿಸಿಕೊಡಲಾಗಿದೆ.

ಆದರೆ ರಾಜ್ಯ ಸರಕಾರದಿಂದ ರಸ್ತೆ ಅಭಿವೃದ್ಧಿಗೆ ಚಿಕ್ಕಾಸು ಬಿಡುಗಡೆಯಾಗುತ್ತಿಲ್ಲವಾದ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿಯಾಗದೆ ಹಿಂದುಳಿಯಲು ಕಾರಣವಾಗಿದೆ.

ರಸ್ತೆ ನಿರ್ಮಾಣ ಹಾಗೂ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯಕ್ಕೆ ರೂ. 10 ಲಕ್ಷ ವೆಚ್ಚದಲ್ಲಿ ಕಾಮಗಾರಿಯನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರ ಜಯರಾಮ್ ಹಾಗೂ ಅಭಿಯಂತರ ವೀರೇಂದ್ರ ಅವರಿಗೆ ಸೂಚಿಸಿದರು.

ನಬಾರ್ಡ್ ಯೋಜನೆಯಡಿಯಲ್ಲಿ ಈ ರಸ್ತೆಯನ್ನು ಮುಂದಿನ ದಿನಗಳಲ್ಲಿ 50 ಅಡಿ ಅಗಲದ ರಸ್ತೆಯನ್ನು ನಿರ್ಮಿಸುವ ಉದ್ದೇಶದಿಂದಾಗಿ ರಸ್ತೆಯ ಇಕ್ಕೆಲಗಳಲ್ಲಿನ ತೋಟ ಮಾಲೀಕರು ರಸ್ತೆ ನಿರ್ಮಾಣಕ್ಕೆ ಸ್ಥಳವನ್ನು ಒದಗಿಸಿಕೊಟ್ಟಲ್ಲಿ ಕೂಡಲೇ ರಸ್ತೆ ಅಗಲೀಕರಣದ ಕಾರ್ಯ ಕೈಗೊಳ್ಳಲಾಗುವದು ಎಂದರು.

ಈ ಸಂದರ್ಭ ಪ್ರಮುಖರುಗಳಾದ ಹುಲ್ಲೂರಿಕೊಪ್ಪ ಚಂದ್ರ, ಬನ್ನಳ್ಳಿ ಗೋಪಾಲ್, ಜಿ. ಮಧು, ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೆಂಚಮ್ಮನಬಾಣೆಯ ವಸಂತ್, ದಿನೇಶ್, ಕುಸುಬೂರು ಗ್ರಾಮದ ಸುಬ್ಬಯ್ಯ, ಹಳ್ಳದಿಣ್ಣೆ ಗ್ರಾಮದ ರಘು, ಸುಂದರ್ ಸೇರಿದಂತೆ ಪ್ರಮುಖರುಗಳು ಇದ್ದರು.