ವರದಿ: Pಜಿಆರ್

ಮಡಿಕೇರಿ, ಮಾ. 7: ಎಡಗಡೆ ನಿಂತರೆ ಒಳಚರಂಡಿಯ ಕೆಲಸ, ಬಲಗಡೆ ನಿಂತರೆ ಕೊಳವೆ ಮಾರ್ಗದ ಕೆಲಸ. ಬಲಗಡೆಯಲ್ಲಿ ಅಗೆದ ಮಣ್ಣು ಮೊದಲಿನಿಂದಲೇ ಹಳ್ಳಗಳಿಂದ ಕೂಡಿದ ಡಾಂಬರು ರಸ್ತೆಯನ್ನು ಅರ್ಧ ಆವರಿಸಿದ್ದರೆ, ಎಡಗಡೆ ಒಳಚರಂಡಿ ನಿರ್ಮಿಸಲು ಬೇಕಾದ ಕಚ್ಚಾವಸ್ತುಗಳಾದ ಜಲ್ಲಿಕಲ್ಲು ಹಾಗೂ ಮರಳಿನ ರಾಶಿ ಇನ್ನರ್ಧ ಹಳ್ಳದ ಡಾಂಬರು ರಸ್ತೆಯನ್ನು ಆವರಿಸಿದೆ. ಇದರ ಮಧ್ಯೆ ಜಾರುತ್ತಾ, ಬೀಳುತ್ತಾ, ನಡೆದಾಡುವ ಪುಟಾಣಿಯರು - ಇದು ಮಡಿಕೇರಿಯ ಕಾನ್ವೆಂಟ್‍ಗೆ ತೆರಳುವ ದಾರಿಯ ದುಸ್ಥಿತಿ!

ಈ ವಿಕೃತ ರೂಪಕ್ಕಿಂತಲೂ ಮೊದಲು, ಇದೇ ರಸ್ತೆಯ ಕಾಲುದಾರಿಯಲ್ಲಿ ಗರ್ಭಿಣಿ ಹಸುವೊಂದು ಹಳ್ಳಕ್ಕೆ ಸಿಲುಕಿ, ಕಾಲಿನ ಮೂಳೆ ಮುರಿದುಕೊಂಡು ಇನ್ನೂ ನರಳುತ್ತಿದೆ. ಇಂತಹ ದುಸ್ಥಿತಿ ಈ ರಸ್ತೆಯಲ್ಲಿ ನಡೆದಾಡುವ ಮಕ್ಕಳಿಗೂ ಒದಗುವ ಮುನ್ನ ನಗರಸಭೆ-ಒಳಚರಂಡಿ ಮಂಡಳಿ ಎಚ್ಚೆತ್ತುಕೊಳ್ಳಬೇಕಿದೆ.

ಈ ಕುರಿತು ನಗರಸಭಾ ಸದಸ್ಯೆ ಲೀಲಾ ಶೇಷಮ್ಮ ಅವರನ್ನು ಸಂಪರ್ಕಿಸಿದಾಗ, ಈ ರಸ್ತೆ ತಮ್ಮ ವಿಭಾಗಕ್ಕೆ ಸೇರದಿದ್ದರೂ, ತಕ್ಷಣವೇ ಅಲ್ಲಿಗೆ ತೆರಳಿ ಮಾಹಿತಿ ಸಂಗ್ರಹಿಸಿ, “ಈ ರಸ್ತೆಯ ದುಸ್ಥಿತಿಗೆ ಅಲ್ಲಿ ಹೊಸದಾಗಿ ಮನೆ ನಿರ್ಮಿಸುತ್ತಿರುವವರು ಕಾರಣರು,” ಎಂದು ತಿಳಿಸಿದ್ದರೂ, ಅದಕ್ಕೆ ಪರಿಹಾರೋಪಾಯ ನೀಡಲಿಲ್ಲ.

ಇನ್ನು, ಈ ವಾರ್ಡ್‍ನ ಸದಸ್ಯೆ ಲಕ್ಷ್ಮಿ ಅವರು, “ಇಲ್ಲಿ ನಡೆಯುತ್ತಿರುವದು ಕೊಳವೆ ಮಾರ್ಗದ ಕೆಲಸವಾದರೂ, ಅಲ್ಲಿ ತಂದು ಹಾಕಿದ ಕಲ್ಲು ಹಾಗೂ ಮರಳಿನ ರಾಶಿ ಒಳ ಚರಂಡಿಯ ವಿಭಾಗಕ್ಕೆ ಸೇರಿದ್ದು,” ಎಂದು ತಿಳಿಸಿದರು. ಇನ್ನು ಒಳ ಚರಂಡಿಯ ಕೆಲಸದ ಜವಾಬ್ದಾರಿ ಹೊತ್ತ ಇಂಜಿನಿಯರ್‍ಗೆ ಕರೆ ನೀಡಿದರೆ, “ನನಗೆ ಇದರ ಸಲುವಾಗಿ ಸರಿಯಾದ ಮಾಹಿತಿ ದೊರೆತಿಲ್ಲ, ಕೇಳಿ ನಿಮಗೆ ತಿಳಿಸುವೆ,” ಎಂದು ಹೇಳಿ ಜಾರಿಕೊಂಡರು. ಹಾಗಾದರೆ, ಇಲ್ಲಿನ ರಸ್ತೆಗಳ ದುಸ್ಥಿತಿಗೆ ಯಾರು ಕಾರಣರು? ಇದಕ್ಕೆ ಪರಿಹಾರ ಯಾವಾಗ ಹಾಗೂ ಯಾರು ಜವಾಬ್ದಾರರು? ನಾಗರಿಕರು ಯಾರ ಮೊರೆ ಹೋಗಬೇಕು? ನಗರ ಸಭೆ ಹಾಗೂ ಒಳಚರಂಡಿ ಮಂಡಳಿಯ ಮಧ್ಯೆ ಇರುವ ಪರಸ್ಪರ ಸಾಮರಸ್ಯದ ಕೊರತೆಗೆ ನಾಗರಿಕರು ಬಲಿಪಶುಗಳಾಗುತ್ತಿದ್ದಾರೆ. ಹೆಚ್ಚಾಗಿ ಈ ರಸ್ತೆಯಲ್ಲಿ ತೆರಳುವ ಪುಟ್ಟ ಕಂದಮ್ಮರು ಆಪತ್ತಿಗೆ ಒಳಗಾಗುವ ಆತಂಕವಿದೆ. ಸಂಪೂರ್ಣ ಧೂಳನ್ನು ಆಘ್ರಾಣಿಸುವ ಮಕ್ಕಳು ಪರೀಕ್ಷೆ ಹತ್ತಿರ ಬರುತ್ತಿರುವ ಸಮಯದಲ್ಲಿ ಆಸ್ಪತ್ರೆಗೆ ತೆರಳುವ ಅವಕಾಶ ಬಾರದಿರಲೆಂದು ದೇವರ ನಾಮ ಜಪಿಸುತ್ತಾ, ಎಚ್ಚರಿಕೆಯಿಂದ ನಡೆದಾಡಬೇಕಷ್ಟೆ!