ವೀರಾಜಪೇಟೆ, ಮಾ. 7: ಸಮೀಪದ ಕೊಟ್ಟೋಳಿ ಗ್ರಾಮದ ಐತಿಹಾಸಿಕ ಹಿನ್ನೆಲೆ ಇರುವ ಶ್ರೀ ಧಾರಾ ಮಹೇಶ್ವರ ದೇವರ ವಾರ್ಷಿಕ ಮಹಾ ಶಿವರಾತ್ರಿ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ಪ್ರಾರ್ಥನೆ, ಗುರು ಗಣಪತಿ ಪೂಜೆ, ಗಣಪತಿ ಹೋಮ, ಮಹಾಪೂಜೆ ನಡೆಯಿತು. ಚಂಗಚಂಡ ಕುಟುಂಬಸ್ಥರ ಐನ್‍ಮನೆಯಿಂದ ಭಂಡಾರ ಬಂದ ನಂತರ ಇರುಳು ಬೆಳಕು ರುದ್ರಾಭಿಷೇಕ, ರುದ್ರಹೋಮ. ಗ್ರಾಮದ ಕೋದಂಡ, ಚಂಗಚಂಡ, ಕೋಣೇರಿರ, ಕುಟ್ಟೇರಿರ ಕುಟುಂಬಸ್ಥರಿಂದ ಎತ್ತು ಪೋರಾಟ ಬಂದ ನಂತರ ಶ್ರೀ ದೇವರ ನೃತ್ಯ, ಅಲಂಕಾರ ಪೂಜೆ, ಮಹಾಪೂಜೆ ನಡೆಯಿತು. ಊಟೋಪಚಾರದ ನಂತರ ಸಂಜೆ ಉತ್ಸವ ಮೂರ್ತಿಯ ಅವಭೃತ ಸ್ನಾನವಾದ ನಂತರ ದೇವಸ್ಥಾನದ ಹನ್ನೊಂದು ಸುತ್ತು ಶ್ರೀ ದೇವರ ನೃತ್ಯವನ್ನು ಅಧಿಕ ಸಂಖ್ಯೆಯಲ್ಲಿ ಭಕ್ತರು ಕಣ್ತುಂಬಿಕೊಂಡರು. ಕುಟ್ಟಿಚಾತ ತೆರೆ, ಅಯ್ಯಪ್ಪ ತೆರೆ, ಕ್ಷೇತ್ರಪಾಲ ತೆರೆ, ಮಂತ್ರವಾದಿ ಗುಳಿಗ ತೆರೆಗಳು ಶ್ರದ್ಧಾಭಕ್ತಿಯಿಂದ ನಡೆಯಿತು. ನಾಗಪೂಜೆ, ಅಮ್ಮನಿಗೆ ತಾಂಬೀಲ ಬ್ರಹ್ಮರಾಕ್ಷಸ ತಾಂಬೀಲ, ಭೈರವಾದಿ ಪಂಚ ಮೂರ್ತಿ ಪೂಜೆಗಳು ನಡೆದವು. ನಂತರ ಹಬ್ಬಕ್ಕೆ ತೆರೆಯೆಳೆಯಲಾಯಿತು.

ಶ್ರೀ ದೇವರ ಹಬ್ಬವನ್ನು ಗ್ರಾಮದ ಎಲ್ಲ ಜನಾಂಗದವರು ಒಟ್ಟಿಗೆ ಸೇರಿ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಅಧ್ಯಕ್ಷ ಕೋದಂಡ ಮುತ್ತಣ್ಣ ಹಾಗೂ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.