ಸೋಮವಾರಪೇಟೆ, ಮಾ. 7: ತ್ರಿವಿಧ ದಾಸೋಹಿಗಳು, ನಡೆದಾಡುವ ದೇವರೆಂದೇ ಖ್ಯಾತಿವೆತ್ತಿರುವ ಡಾ. ಶಿವಕುಮಾರ ಸ್ವಾಮೀಜಿಗಳ ಜನ್ಮದಿನವನ್ನು ಸಂತರ ದಿನವನ್ನಾಗಿ ಆಚರಿಸುವಂತಾಗಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.ಸಿದ್ದಗಂಗಾ ಮಠಾಧೀಶರಾದ ಡಾ. ಶಿವಕುಮಾರ ಸ್ವಾಮೀಜಿಗಳ 110ನೇ ಜನ್ಮದಿನೋತ್ಸವದ ಅಂಗವಾಗಿ ಆಗಮಿಸಿದ ಶ್ರೀಗಳ ಶೋಭಾಯಾತ್ರೆ ರಥವನ್ನು ಪಟ್ಟಣದ ಆನೆಕೆರೆ ಬಳಿಯಲ್ಲಿ ಸ್ವಾಗತಿಸಿ ಮಾತನಾಡಿದರು.
ಶಿವಕುಮಾರ ಶ್ರೀಗಳು ಈ ನಾಡು ಕಂಡ ಅಪೂರ್ವ ಸಂತರು. ಇವರು ಈ ರಾಜ್ಯದಲ್ಲಿ ಜನಿಸಿದ್ದು ನಮ್ಮೆಲ್ಲರ ಪುಣ್ಯ. ಏಪ್ರಿಲ್ 1 ರಂದು ಮೂರ್ಖರ ದಿನವನ್ನಾಗಿ ಆಚರಿಸುತ್ತಾರೆ, ಆದರೆ ಇಂತಹ ಮಹಾನ್ ವ್ಯಕ್ತಿಗಳು ಜನಿಸಿದಂತಹ ಈ ದಿನವನ್ನು ಸಂತರ ದಿನ, ಪವಿತ್ರ ದಿನವನ್ನಾಗಿ ಆಚರಿಸಬೇಕಾಗಿದೆ ಎಂದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಶ್ರೀಗಳ ಆಶೀರ್ವಾದದಿಂದ ಸಿದ್ದಗಂಗಾ ಮಠದಲ್ಲಿ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ, ನಿತ್ಯ ದಾಸೋಹ ನಡೆಯುತ್ತಿದೆ. ಅವರ ಕಾಯಕಕ್ಕೆ ಎಣೆಯೇ ಇಲ್ಲ. ಇಂತಹ ಸಂತರು ಈ ದೇಶಕ್ಕೆ ಮಾರ್ಗದರ್ಶಕರು ಎಂದು ಬಣ್ಣಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಶ್ರೀಗಳಿಗೆ ಕೇಂದ್ರ ಸರಕಾರ ಈ ಬಾರಿಯಾದರೂ ಭಾರತರತ್ನ ನೀಡುವಂತಾಗಲಿ ಎಂದು ಆಶಿಸಿದರು. ಶ್ರೀಗಳ ರಥಕ್ಕೆ ಪಟ್ಟಣದ ಶ್ರೀ ವಿದ್ಯಾಗಣಪತಿ ದೇವಾಲಯ, ಶ್ರೀ ಸೋಮೇಶ್ವರ ದೇವಾಲಯ ಹಾಗೂ ಶ್ರೀ ಬಸವೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಪಟ್ಟಣದ ಅಂಬೇಡ್ಕರ್ ಪ್ರತಿಮೆಯ ಬಳಿ ರಥವನ್ನು ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ, ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯರುಗಳಾದ ಧರ್ಮಪ್ಪ, ತಂಗಮ್ಮ, ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ಪ್ರಮುಖರಾದ ಡಿ.ಬಿ. ಧರ್ಮಪ್ಪ, ಭರತ್‍ಕುಮಾರ್, ಸಿ.ಪಿ. ಗೋಪಾಲ್, ಕಸಾಪ ತಾಲೂಕು ಅಧ್ಯಕ್ಷ ಜವರ ಸೇರಿದಂತೆ ಇತರರು ಉಪಸ್ಥಿತರಿದ್ದರು.