ಕುಶಾಲನಗರ, ಮಾ. 7: ರಾಜ್ಯ ಸರಕಾರ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವದರೊಂದಿಗೆ ಸಾವಯವ ಕೃಷಿ ಪದ್ಧತಿ ಪ್ರೋತ್ಸಾಹಿಸುವಲ್ಲಿ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹೇಳಿದರು.
ಕೂಡಿಗೆ ಕೃಷಿ ಕ್ಷೇತ್ರ ಆವರಣದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಕೊಡಗು ಮತ್ತು ಹಾಸನ ಜಿಲ್ಲಾ ಪ್ರಾಂತ್ಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳ ಮೇಳ ಹಾಗೂ ರೈತ ಸಂಪರ್ಕ ಕೇಂದ್ರ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಕೃಷಿಯಲ್ಲಿ ಕನಿಷ್ಟ ಆದಾಯದ ಕಾರಣದಿಂದಾಗಿ ರೈತರ ಮಕ್ಕಳು ಕೃಷಿಯತ್ತ ಬೆನ್ನು ಮಾಡಿ ಉದ್ಯೋಗ ಅರಸಿ ಪರ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ವಿಷಾದಿಸಿದರು. ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ. ಕೆ. ರಾಮಪ್ಪ ಪ್ರಾಸ್ತಾವಿಕ ನುಡಿಗಳಾಡಿದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ವಿಶೇಷ ಅಡುಗೆಗಳ ‘ಆರೋಗ್ಯ ಸಿರಿ’ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಸುಂಟಿಕೊಪ್ಪದ ಪ್ರಗತಿಪರ ಕೃಷಿಕ ಮಹಿಳೆ ಪಾರ್ವತಿ ವಸಂತ್ ಪ್ರಾರ್ಥಿಸಿದರು, ಪರಂಪರ ಕಲಾತಂಡ ರೈತಗೀತೆ ಹಾಡಿದರು, ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಾ. ಹೆಚ್.ಎಸ್. ರಾಜಶೇಖರ್ ಸ್ವಾಗತಿಸಿದರು. ತಾಂತ್ರಿಕಗೋಷ್ಠಿ ಮತ್ತು ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಮೇಳದಲ್ಲಿ ತೋಟಗಾರಿಕಾ ಇಲಾಖೆ, ಸಂಬಾರ ಮಂಡಳಿ, ಮೀನುಗಾರಿಕಾ ಇಲಾಖೆ, ಆರೋಗ್ಯ ಶಿಕ್ಷಣ ಮಾಹಿತಿ ಕೇಂದ್ರ, ಸಾವಯವ ಉತ್ಪನ್ನಗಳ ಪ್ರದರ್ಶನ ಮಳಿಗೆ, ಕೃಷಿ ವಸ್ತು ಪ್ರದರ್ಶನ, ಮಣ್ಣು ಪರೀಕ್ಷಾ ಕೇಂದ್ರ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಸೇರಿದಂತೆ 30 ಕ್ಕೂ ಅಧಿಕ ವಿವಿಧ ಮಳಿಗೆಗಳ ಮೂಲಕ ಉತ್ಪನ್ನಗಳ ಪ್ರದರ್ಶನ ಹಾಗೂ ಮಾಹಿತಿ ಒದಗಿಸಲಾಯಿತು.
ಪರಿಸರ ರಕ್ಷಣೆಗೆ ಸಚಿವರ ಕರೆ
ಆನೆಕಾಡು ಮೀಸಲು ಅರಣ್ಯದ ಅಗ್ನಿ ನರ್ತನಕ್ಕೆ 150 ಎಕರೆ ಪ್ರದೇಶ ಮಾತ್ರ ನಾಶವಾಗಿದೆ ಎಂದು ಪತ್ರಕರ್ತರಿಗೆ ಸಚಿವ ಸೀತಾರಾಂ ಮಾಹಿತಿ ನೀಡಿದರು.