ವೀರಾಜಪೇಟೆ, ಮಾ. 7: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದ್ದು, ಕೇಂದ್ರದ ನೋಟ್ ರದ್ದತಿಯಿಂದ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹೇಳಿದರು.ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾರು ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಜನ ವೇದÀನ ಸಮಾವೇಶದಲ್ಲಿ ಮಾತನಾಡಿ ಕೇಂದ್ರ ಸರ್ಕಾರ ನವೆಂಬರ್ 8 ರಂದು 500 ಹಾಗೂ ಸಾವಿರ ಮುಖಬೆಲೆಯ ನೋಟ್ ಅಮಾನ್ಯಗೊಳಿಸಿ ಏನೋ ಸಾಧನೆ ಮಾಡಲು ತೆರಳಿ ತಾನೇ ವಿವಾದದ ಸುಳಿಯಲ್ಲಿ ಸಿಲುಕಿ ಹೊರಬರಲು ಸಾಧ್ಯವಾಗದ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದರು. ರಾಜ್ಯ ಸರ್ಕಾರ ರೈತರು ಹಾಗೂ ಜನ ಸಾಮಾನ್ಯರ ಪರವಾಗಿದ್ದು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಕಳೆದ ಬಾರಿ ಚುನಾವಣೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಶೇ 80 ರಷ್ಟು ಪೂರ್ಣಗೊಳಿಸಿದೆ. ಪ್ರತಿ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವದರ ಮೂಲಕ ಮನೆ ಮಾತಾಗಿರುವ ಇಂದಿನ ಕಾಂಗ್ರೆಸ್ ಸರ್ಕಾರ ಮುಂದಿನ ಬಾರಿಯು ಅಧಿಕಾರಕ್ಕೆ ಬರುತ್ತದೆ. ಯಾವ ಸರ್ಕಾರ ಬಂದರೆ ಜನ ಸಾಮಾನ್ಯರಿಗೆ ಅನುಕೂಲವಾಗುತ್ತದೆ ಎಂಬದನ್ನು ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್‍ನ ಪ್ರಬಾರ ಅಧ್ಯಕ್ಷ ಟಿ.ಪಿ ರಮೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಿಟ್ಲರ್ ಧೋರಣೆಯಂತೆ ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ. ನೋಟ್ ಬ್ಯಾನ್ ಮಾಡಿದ ಸಂಧರ್ಭ ಎಲ್ಲ ರಾಜಕೀಯ ಪಕ್ಷಗಳು ಸ್ವಾಗತಿಸಿದವು. ಆದರೆ ಮುಂಜಾಗೃತಾ ಕ್ರಮ ತೆಗೆದುಕೊಳ್ಳದ ಕಾರಣ ಅನನುಭವಿ ಪ್ರಧಾನಿ ಎಂದು ಸಾಬೀತು ಮಾಡಿ ದೂರಿದ್ದಾರೆ. ಜನ ಸಾಮಾನ್ಯರ ಮೇಲೆ ದಿನಕ್ಕೊಂದು ತೆರಿಗೆಗಳನ್ನು ವಿಧಿಸಿ ನಿರಂತರ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಈಗಿನ 2 ಸಾವಿರ ಮೌಲ್ಯದ ನೋಟಿನ ಕಪ್ಪು ಹಣ ಇಡೀ ರಾಷ್ಟ್ರಾದ್ಯಂತ ಚಲಾವಣೆಯಲ್ಲಿದೆ ಇದರ ಬಗ್ಗೆ ಮೋದಿ ಅವರು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ವೇದಿಕೆಯಲ್ಲಿ ಮಾಜಿ ಸಂಸದ ಎ.ಎ. ಸಿದ್ದರಾಜು, ರಾಜ್ಯ ಅರಣ್ಯ ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಯಾಕೂಬ್, ವಿಧಾನ ಪರಿಷತ್‍ನ ಮಾಜಿ ಸದಸ್ಯ ಅರುಣ್ ಮಾಚಯ್ಯ, ಎಐಸಿಸಿ ಸದಸ್ಯೆ ಉಷಾ ನಾಯ್ಡು ಮತ್ತಿತರರು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ಸಲಾಂ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕಾಂಗ್ರೆಸ್‍ನ ಜಿಲ್ಲಾ ಸಮಿತಿಯ ಡಿ.ಸಿ. ಧ್ರುವ, ಸೇವಾದಳದ ಸಿ.ಪಿ. ಕಾವೇರಪ್ಪ, ವಿ.ಕೆ. ಸತೀಶ್, ಎಂ.ಕೆ. ಬೋಪಣ್ಣ, ಮರ್ವೀನ್ ಲೋಬೋ, ಎಂ.ಎಸ್. ಪೂವಯ್ಯ, ಜಿ.ಜಿ. ಮೋಹನ್ ಉಪಸ್ಥಿತರಿದ್ದರು. ನಗರ ಸಮಿತಿಯ ಎಂ.ಎಂ. ಶಶಿಧರನ್ ನಿರೂಪಿಸಿದರು. ಸಭೆಗೆ ಮೊದಲು ಕಾರ್ಯಕರ್ತರು ಕಾಂಗ್ರೆಸ್ ಕಚೇರಿಯಿಂದ ಖಾಸಗಿ ಬಸ್ಸ್ ನಿಲ್ದಾಣದವರೆಗಿನ ಮುಖ್ಯ ರಸ್ತೆಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಮೆರವಣಿಗೆ ನಡೆಸಿದರು.