ಅಡಗುತಾಣಗಳ ಮೇಲೆ ಧಾಳಿ: ಮೂವರು ಉಗ್ರರ ಬಂಧನ
ಶ್ರೀನಗರ, ಮಾ. 8: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಅಡಗುತಾಣಗಳ ಮೇಲೆ ಜಮ್ಮು ಮತ್ತು ಕಾಶ್ಮೀರ ಪೆÇಲೀಸರು ಧಾಳಿ ನಡೆಸಿದ್ದು, ಮೂವರು ಶಂಕಿತ ಉಗ್ರರನ್ನು ಬಂಧನಕ್ಕೊಳಪಡಿಸಿದ್ದಾರೆ. ಶ್ರೀನಗರ ಬೆಮಿನಾ ಬೈಪಾಸ್ ಕ್ರಾಸ್ ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ಶಂಕಿತ ಉಗ್ರರು ಸಿಕ್ಕಿಬಿದ್ದಿದ್ದಾರೆ. ಉಗ್ರರ ಬಳಿಯಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಬಳಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ್ದ ಉಗ್ರನೊಬ್ಬನನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು. ಈ ವೇಳೆ ಉಗ್ರರನ ಬಳಿಯಿದ್ದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಭಯೋತ್ಪಾದಕನ ಮೃತದೇಹ ಪಡೆಯಲು ತಂದೆ ನಿರಾಕರಣೆ
ಲಖನೌ, ಮಾ. 8: ಲಖನೌನಲ್ಲಿ ಭಯೋತ್ಪಾದಕ ನಿಗ್ರಹ ಪಡೆ(ಎಟಿಎಸ್) ಗುಂಡೇಟಿಗೆ ಬಲಿಯಾದ ಶಂಕಿತ ಭಯೋತ್ಪಾದಕ ಸೈಫುಲ್ಲಾ ಮೃತದೇಹವನ್ನು ಸ್ವೀಕರಿಸಲು ಆತನ ತಂದೆ ಸರ್ತಾಜ್ ನಿರಾಕರಿಸಿದ್ದಾರೆ. ‘ಭಯೋತ್ಪಾದಕ ನನ್ನ ಮಗನಾಗಲು ಸಾಧ್ಯವಿಲ್ಲ. ನಮ್ಮ ಪೂರ್ವಜರು ಹುಟ್ಟಿದ್ದು ಇದೇ ನಾಡಲ್ಲಿ, ನಾನು ಹುಟ್ಟಿದ್ದು ಇಲ್ಲೆ, ನಾವು ಭಾರತೀಯರು. ಇಲ್ಲೇ ಹುಟ್ಟಿ ಬೆಳೆದು ದೇಶದಲ್ಲಿ ಭಯೋತ್ಪಾದನೆ ಕೃತ್ಯ ನಡೆಸಿದ ಆತ ನನ್ನ ಮಗನಾಗಲು ಸಾಧ್ಯವಿಲ್ಲ. ಆತನ ಭಯೋತ್ಪಾದನೆಯ ಕೃತ್ಯಗಳು ನನಗೆ ತಿಳಿದಿರಲಿಲ್ಲ. ಹೀಗಾಗಿ ನಾನು ಆತನ ಮೃತದೇಹ ಸ್ವೀಕರಿಸಲ್ಲ’ ಎಂದು ಸರ್ತಾಜ್ ಹೇಳಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ 9 ಮಂದಿ ಭಯೋತ್ಪಾದಕರ ಪೈಕಿ ಸೈಫುಲ್ಲಾ ಸಹ ಒಬ್ಬನಾಗಿದ್ದ. ಲಖನೌ ಹೊರವಲಯದ ಠಾಕೂರ್ ಗಂಜ್ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಸೈಫುಲ್ಲಾನನ್ನು ಹೊಡೆದುರುಳಿಸುವಲ್ಲಿ ಭಯೋತ್ಪಾದನಾ ನಿಗ್ರಹ ದಳ ಯಶಸ್ವಿಯಾಗಿತ್ತು. ಉಜ್ಜೈನ್ ರೈಲು ಸ್ಫೋಟ ಪ್ರಕರಣದಲ್ಲಿ ಒಟ್ಟು 9 ಮಂದಿ ಶಂಕಿತ ಉಗ್ರರ ಕೈವಾಡದ ಕುರಿತು ಮಾಹಿತಿಗಳು ಲಭ್ಯವಾಗಿವೆ.
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ಶ್ರೀನಗರ, ಮಾ. 8: ಜವಾಹರ್ ಸುರಂಗ ಮಾರ್ಗದ ಸುತ್ತಮುತ್ತ ಹಾಗೂ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಭಾರೀ ಹಿಮ ಬೀಳುತ್ತಿರುವ ಹಿನ್ನೆಲೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ತೀವ್ರ ಹಿಮಪಾತವಾಗುತ್ತಿರುವ ಹಿನ್ನೆಲೆಯಲ್ಲಿ ರಂಬನ್ ಮತ್ತು ರಮ್ಸು ನಡುವಿನ ರಸ್ತೆ ಸಂಪರ್ಕ ಬಂದ್ ಆಗಿದೆ. ದಕ್ಷಿಣ ಕಾಶ್ಮೀರದ ಶೋಫಿಯನ್ ಜಿಲ್ಲೆಯ ಐತಿಹಾಸಿಕ ಮುಘಲ್ ರಸ್ತೆ, ಜಮ್ಮುವಿನ ರಜೌರಿ ಮತ್ತು ಪೂಂಚ್, ಶಿಮ್ಲಾದ ಸುತ್ತಮುತ್ತಲಿನ ಪ್ರದೇಶ ಕುಫ್ರಿ, ನರ್ಕಂಡ ಮತ್ತು ಖರ್ ಪತ್ಥರ್ನಲ್ಲೂ ಹಿಮಪಾತವಾಗುತ್ತಿದೆ. ತಾಪಮಾನ ಕನಿಷ್ಟಕ್ಕೆ ಕುಸಿಯುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಯು ಪರೀಕ್ಷೆ ಬರೆಯಲು 4,204 ವಿದ್ಯಾರ್ಥಿಗಳಿಗೆ ನಿರ್ಬಂಧ
ಬೆಂಗಳೂರು, ಮಾ. 8: ಪದೇ ಪದೇ ತರಗತಿಗೆ ಚಕ್ಕರ್ ಹಾಕುವ ವಿದ್ಯಾರ್ಥಿಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ಶಾಕ್ ನೀಡಿದೆ. ಕಡಿಮೆ ಹಾಜರಾತಿಯ ಕಾರಣ ತಾ. 9 ರಿಂದ ಆರಂಭವಾಗುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 4,204 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನಿಷೇಧ ಹೇರಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೇ ಈ ವರ್ಷ ಕಾಲೇಜಿಗೆ ಗೈರು ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಡಿಮೆ ಹಾಜರಾತಿಯ ಕಾರಣ ಮಾರ್ಚ್-ಏಪ್ರಿಲ್ 2016 ರ ಪರೀಕ್ಷೆಗೆ 1,000 ವಿದ್ಯಾರ್ಥಿಗಳು ಹಾಜರಾಗಲು ಅನರ್ಹರಾಗಿದ್ದರು. 2015 ರಲ್ಲಿ 2,050 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಿಂದ ಹೊರಗುಳಿದ್ದಿದರು. 2006ರ ಕರ್ನಾಟಕ ಶಿಕ್ಷಣ ಕಾಯಿದೆಯ 21 ನೇ ನಿಯಮದ ಪ್ರಕಾರ ವಿದ್ಯಾರ್ಥಿ ಅಂತಿಮ ಪರೀಕ್ಷೆ ಬರೆಯಲು ಶೇ. 75 ರಷ್ಟು ಹಾಜರಾತಿ ಕಡ್ಡಾಯವಾಗಿದೆ. ಇದೇ ನಿಯಮ ಪ್ರಥಮ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೂ ಅನ್ವಯವಾಗಲಿದೆ. ಹಾಜರಾತಿ ಕಡಿಮೆ ಇದ್ದರೂ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಪ್ರವೇಶ ಪತ್ರ ನೀಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡುವದನ್ನು ಇಲಾಖೆ ಸ್ಥಗಿತಗೊಳಿಸಿದೆ.
ಸಾಲ ಬಾಧೆಗೆ ಹೆದರಿದ ರೈತ ಕುಟುಂಬ ಸಾವಿಗೆ ಶರಣು
ತುಮಕೂರು, ಮಾ. 8: ಸಾಲಾಬಾಧೆಗೆ ಹೆದರಿದ ರೈತ ಕುಟುಂಬವೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿರಾ ತಾಲೂಕಿನ ಬುಕಪಟ್ಟಣ ಹೋಬಳಿಯ ಹೊಸಬಿಜ್ಜನಬೆಲ್ಲ ಗ್ರಾಮದಲ್ಲಿ ನಡೆದಿದೆ. ಹೊಸಜಿಜ್ಜನಬೆಲ್ಲ ಗ್ರಾಮದ ವರ್ಷದ ಸಿದ್ದಪ್ಪ, ಪತ್ನಿ ತಾಯಮ್ಮ ಹಾಗೂ ಪುತ್ರಿ ಉಮಾದೇವಿ ಮೂವರು ಹೊಸಬಿಜ್ಜನಬೆಲ್ಲದ ಹೊರವಲಯದಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೃಷಿಗಾಗಿ ಸಿದ್ದಪ್ಪ ಅವರು ವಿವಿಧ ಬ್ಯಾಂಕ್ಗಳಿಂದ ಸುಮಾರು ರೂ. 5 ಲಕ್ಷ ಸಾಲ ತೆಗೆದುಕೊಂಡಿದ್ದರು ಎನ್ನಲಾಗಿದೆ. ತನ್ನ ಹತ್ತು ಎಕರೆ ಜಮೀನಿನಲ್ಲಿ ಶೇಂಗಾ ಮತ್ತು ರಾಗಿ ಕೃಷಿ ಮಾಡಿದ್ದರು. ಆದರೆ ತೀವ್ರ ಬರದಿಂದಾಗಿ ಬೆಳೆ ಸಂಪೂರ್ಣ ನಾಶವಾಗಿದ್ದು, ಇದರಿಂದ ಮನನೊಂದ ಕುಟುಂಬ ಸಾಲ ಮರುಪಾವತಿಸುವ ದಾರಿ ಕಾಣದೆ ಆತ್ಮಹತ್ಯೆ ಮಾಡಿಕೊಂಡಿದೆ.
ಕಾಬೂಲ್ ಸೇನಾ ಆಸ್ಪತ್ರೆ ಮೇಲೆ ಉಗ್ರರ ಧಾಳಿ
ಕಾಬುಲ್, ಮಾ. 8: ಆಫ್ಘಾನಿಸ್ತಾನದ ಕಾಬೂಲ್ನಲ್ಲಿರುವ ಸೇನಾ ಆಸ್ಪತ್ರೆ ಮೇಲೆ ಉಗ್ರರು ಧಾಳಿ ನಡೆಸಿದ್ದು, ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಇಂದು ಬೆಳಿಗ್ಗೆ 5 ಜನರಿದ್ದ ಉಗ್ರರ ಗುಂಪೆÇಂದು ಏಕಾಏಕಿ ಸೇನಾ ಆಸ್ಪತ್ರೆಯೊಳಗೆ ನುಗ್ಗಿದೆ. ಈ ವೇಳೆ ಆಸ್ಪತ್ರೆಯ ಮುಖ್ಯದ್ವಾರದ ಬಳಿ ಬಾಂಬ್ವೊಂದನ್ನು ಸ್ಫೋಟಿಸಿ ಆಸ್ಪತ್ರೆಯ ಒಳನುಗ್ಗಿದೆ. ಘಟನೆಯಲ್ಲಿ ಸಾವು-ನೋವುಗಳು ಸಂಭವಿಸಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಆಸ್ಪತ್ರೆ ಒಳ ನುಗ್ಗಿರುವ ಉಗ್ರರು ರೋಗಿಗಳು, ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ಧಾಳಿ ನಂತರ ಆಸ್ಪತ್ರೆ ಒಳಗಿರುವ ಕೆಲವು ಸಿಬ್ಬಂದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೆÇೀಸ್ಟ್ಗಳನ್ನು ಹಾಕಿದ್ದು, ಧಾಳಿಕೋರರು ಆಸ್ಪತ್ರೆಯ ಒಳಗಿದ್ದಾರೆ. ನಮ್ಮ ಕ್ಷೇಮಕ್ಕಾಗಿ ಪ್ರಾರ್ಥಿಸಿ ಎಂದು ಹೇಳಿಕೊಂಡಿದ್ದಾರೆ. ಧಾಳಿ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿರುವ ಸೇನಾಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಪ್ರಸ್ತುತ ಸ್ಥಳದಲ್ಲಿ ಉಗ್ರರು ಹಾಗೂ ಯೋಧರ ನಡುವೆ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ.
ಸಹಾಯಕ್ ಪದ್ಧತಿ ವಿರುದ್ಧ ಯೋಧ ಅಸಮಾಧಾನ
ನವದೆಹಲಿ, ಮಾ. 8: ಸೇನೆಯಲ್ಲಿ ಕೆಲವು ಅಧಿಕಾರಿಗಳು ಸಹಾಯಕ್ ಪದ್ಧತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಸಿಂಧವ್ ಜೋಗಿದಾಸ್ ಆರೋಪಿಸಿದ್ದಾರೆ. ಸಹಾಯಕ್ ಪದ್ಧತಿ ಕುರಿತಂತೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವ ಜೋಗಿದಾಸ್ ಅವರು, ರಜೆ ಮುಗಿಸಿ ಬರುವಾಗ ಎರಡು ದಿನ ತಡವಾದುದ್ದಕ್ಕಾಗಿ ತಮಗೆ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ರಾಷ್ಟ್ರದ ಘನತೆ ಎಲ್ಲಕ್ಕಿಂತಲೂ ಹೆಚ್ಚಿನದು ಎಂದು ಸೇನೆಗೆ ಬರುವ ಪ್ರತಿಯೊಬ್ಬ ಯೋಧನೂ ಭಾವಿಸುತ್ತಾರೆ. ಆದರೆ, ಕೆಲವು ಅಧಿಕಾರಿಗಳು ಸಹಾಯಕರನ್ನು ಗುಲಾಮರಂತೆ ನೋಡುತ್ತಿದ್ದಾರೆ. ಇದರ ವಿರುದ್ಧ ದನಿಯೆತ್ತಿದವರನ್ನು ಶಿಕ್ಷಿಸಲಾಗುತ್ತದೆ. ಇದನ್ನು ಇನ್ನು ಎಷ್ಟು ದಿನಗಳ ಕಾಲ ಸಹಿಸಿಕೊಳ್ಳಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಇನ್ನು ಯೋಧನ ಆರೋಪವನ್ನು ತಳ್ಳಿಹಾಕಿರುವ ಸೇನಾಧಿಕಾರಿಗಳು, ಆರೋಪಗಳು ಆಧಾರ ರಹಿತವಾದದ್ದು ಎಂದು ಹೇಳಿದ್ದಾರೆ. ಸಹಾಯಕ್ ಪದ್ಧತಿ ವಿರುದ್ಧ ಈ ಹಿಂದೆ ಲಾನ್ಸ್ ನಾಯ್ಕ್ ರಾಯ್ ಮ್ಯಾಥ್ಯೂ ಎಂಬ ಯೋಧ ತಿರುಗಿ ಬಿದ್ದಿದ್ದರು. ವೆಬ್ಸೈಟ್ ಸುದ್ದಿ ಮಾಧ್ಯಮವೊಂದು ನಡೆಸಿದ್ದ ಈ ಕಾರ್ಯಾಚರಣೆಯಲ್ಲಿ ಯೋಧ ಮ್ಯಾಥ್ಯೂ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ಕುಟುಕು ಕಾರ್ಯಾಚರಣೆ ಬಹಿರಂಗಗೊಂಡ ಕೇಲವೇ ದಿನಗಳಲ್ಲಿ ಮ್ಯಾಥ್ಯೂ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಇದೀಗ ಜೋಗಿದಾಸ್ ಅವರು ಸಹಾಯಕ್ ಪದ್ಧತಿ ವಿರುದ್ಧ ದನಿ ಎತ್ತಿದ್ದಾರೆ.