ಮಡಿಕೇರಿ, ಮಾ. 8: ನಗರದ ‘ಮ್ಯಾನ್ಸ್ ಕಾಂಪೌಂಡ್’ ಸೇರಿದಂತೆ ವಿಶಾಲ ಪರಿಸರದಿಂದ ಕೂಡಿರುವ ಜಿಲ್ಲಾ ಕ್ರೀಡಾಂಗಣ ಸುತ್ತಮುತ್ತ ಸ್ವಚ್ಛತೆಯೊಂದಿಗೆ ಅನ್ಯ ಚಟುವಟಿಕೆಗಳಿಗೆ ಅವಕಾಶವಾಗದಂತೆ ಗಮನ ಹರಿಸಬೇಕೆಂದು ಹಿರಿಯ ನಾಗರಿಕ ಕೊಕ್ಕಲೇರ ಎ. ಕಾರ್ಯಪ್ಪ ಹಾಗೂ ಅಕ್ಕಪಕ್ಕ ನಿವಾಸಿಗಳು ಆಗ್ರಹಿಸಿದ್ದಾರೆ.ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಅವರುಗಳು, ಕ್ರೀಡಾಕೂಟ ಇತ್ಯಾದಿ ಸಂಘಟಿಸಿ, ಕಾರ್ಯಕ್ರಮದಲ್ಲಿ ಊಟ ಇತ್ಯಾದಿ ಸೇವಿಸಿ, ಎಲ್ಲೆಂದರಲ್ಲಿ ತಟ್ಟೆ ,ಲೋಟಗಳ ಸಹಿತ ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯುತ್ತಿರುವ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ತಾಲೂಕು ಘಟಕದ ಪುಸ್ತಕ ಗೋದಾಮು ಇಲ್ಲಿದ್ದು, ಶಿಥಿಲ ಕಿಟಕಿ, ಬಾಗಿಲು ಮುರಿದು ಕಳ್ಳರು, ಇಲಾಖೆಯ ಪುಸ್ತಕಗಳನ್ನು ಕದ್ದೊಯ್ಯುತ್ತಿದ್ದು, ಸಂಬಂಧಪಟ್ಟವರು ಯಾವದೇ ಕ್ರಮ ಕೈಗೊಂಡಿಲ್ಲವೆಂದು ಕಾರ್ಯಪ್ಪ ಬೊಟ್ಟು ಮಾಡಿದ್ದಾರೆ.
ಫೆ. 28 ರಂದು ಗೋದಾಮು ಕಿಟಕಿ ಮುರಿದು ಇಬ್ಬರು ಕಳ್ಳರು ಚೀಲಗಳಲ್ಲಿ ಪುಸ್ತಕಗಳನ್ನು ತುಂಬುತ್ತಿದ್ದ ವೇಳೆ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಶಿಕ್ಷಣ ಇಲಾಖೆ ಮಂದಿ ದೂರು ನೀಡದೆ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪರಿಸರದ ನೈರ್ಮಲ್ಯ ಕಾಪಾಡುವದು, ಕಳ್ಳತನಕ್ಕೆ ಅವಕಾಶವಾಗದಂತೆ ಗೋದಾಮುವಿನ ಭದ್ರತೆಗೆ ಕ್ರಮಕೈಗೊಳ್ಳುವದು ಸಹಿತ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.