ಸಿದ್ದಾಪುರ, ಮಾ.7: ದಿಡ್ಡಳ್ಳಿ ನಿರಾಶ್ರಿತರಿಗೆ ದಿಡ್ಡಳ್ಳಿಯಲ್ಲಿಯೇ ನಿವೇಶನ ನೀಡಬೇಕೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿಯ ಪದಾಧಿಕಾರಿಗಳು ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದರು.ಬೆಂಗಳೂರಿನ ವಿಧಾನಸೌಧದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಮಿತಿಯ ಪದಾಧಿಕಾರಿಗಳು ದಿಡ್ಡಳ್ಳಿಯ ಅರಣ್ಯದ ಅಂಚಿನಲ್ಲಿ ಆದಿವಾಸಿಗಳು ಈ ಹಿಂದಿನಿಂದ ವಾಸವಾಗಿದ್ದು, ಒಂದೇ ಪ್ರದೇಶದಲ್ಲಿ ಆದಿವಾಸಿಗಳಿಗೆ ನಿವೇಶನವನ್ನು ಒದಗಿಸಿ ಅವರಿಗೆ ಸೂರು ಕಲ್ಪಿಸಬೇಕೆಂದು ಒತ್ತಾಯಿಸಿದರು. ಈಗಾಗಲೇ ಸರಕಾರ ಲಾಟರಿ ಮುಖಾಂತರ ಅವೈಜ್ಞಾನಿಕವಾಗಿ ನಿವೇಶನ ಹಂಚಲು ಮುಂದಾಗಿದ್ದು, ಸರಕಾರ ಗುರುತಿಸಿರುವ ಜಾಗದಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದ ಕಾರಣ ಆದಿವಾಸಿಗಳು ತೆರಳುವದಿಲ್ಲ ಎಂದರು ಎನ್ನಲಾಗಿದೆ. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು ಬಜೆಟ್ ಕಳೆದ ಬಳಿಕ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಭೇಟಿಯ ಸಂದರ್ಭ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೈಸ್ವಾಮಿ, ಚಿತ್ರನಟ ಚೇತನ್, ಸಮಿತಿಯ ಪ್ರಮುಖರಾದ ಸಿರಿಮನೆ ನಾಗರಾಜ್, ಡಿ.ಎಸ್ ನಿರ್ವಾಣಪ್ಪ, ಅಮೀನ್ ಮೊಹಿಸಿನ್ ಇನ್ನಿತರರು ಇದ್ದರು.