ವೀರಾಜಪೇಟೆ, ಮಾ. 8: ಪತ್ನಿಯ ತಲೆಗೆ ಕುಡುಗೋಲಿನಿಂದ ಹೊಡೆದು ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಆರೋಪದ ಮೇರೆ ವೀರಾಜಪೇಟೆ ಎರಡನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಟಿ.ಎಂ. ನಾಗರಾಜು ಅವರು ಆರೋಪಿ ಪಣಿ ಎರವರ ಬೊಳ್ಳಿ (60) ಎಂಬವನನ್ನು ದೋಷಮುಕ್ತನೆಂದು ಪರಿಗಣಿಸಿ ಆರೋಪದಿಂದ ಬಿಡುಗಡೆಗೊಳಿಸಿ ತೀರ್ಪು ನೀಡಿದ್ದಾರೆ.
ತಾ. 6-6-2016 ರಂದು ರಾತ್ರಿ ಬೊಳ್ಳಿ ಹಾಗೂ ಆತನ ಪತ್ನಿ ಗೌರಿ (50) ಕಂಠ ಪೂರ್ತಿ ಮದ್ಯ ಸೇವಿಸಿ ಜಗಳವಾಡುತ್ತಿದ್ದರು. ಜಗಳ ವಿಕೋಪಕ್ಕೆ ತೆರಳಿದಾಗ ಬೊಳ್ಳಿ ನಿಶಾದ ಗುಂಗಿನಲ್ಲಿ ಪತ್ನಿ ತಲೆಗೆ ಕೋಲಿನಿಂದ ಬಲವಾಗಿ ಹೊಡೆದಾಗ ಆಕೆ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು.
ಸಿದ್ದಾಪುರ ಪೊಲೀಸರು ಬೊಳ್ಳಿ ವಿರುದ್ಧ ಪ್ರಕರಣ ದಾಖಲು ಮಾಡಿ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪೊಲೀಸರು ದಾಖಲಿಸಿದ್ದ 17 ಮಂದಿ ಸಾಕ್ಷಿದಾರರ ಪೈಕಿ ನ್ಯಾಯಾಧೀಶರು 9 ಮಂದಿಯನ್ನು ವಿಚಾರಣೆಗೊಳಪಡಿಸಿದ್ದರು. ಆದರೆ ಬೊಳ್ಳಿ ಪತ್ನಿಯನ್ನು ಕೊಲೆ ಮಾಡಿರುವದಕ್ಕೆ ಸೂಕ್ತವಾದ ಸಾಕ್ಷ್ಯಾಧಾರಗಳು ಇಲ್ಲದ್ದರಿಂದ ಆರೋಪದಿಂದ ಬಿಡುಗಡೆಗೊಳಿಸಿದ್ದಾರೆ.
ಕೊಲೆ ಆರೋಪಿ ಬೊಳ್ಳಿ ತಾನು ಆರ್ಥಿಕವಾಗಿ ಹಿಂದುಳಿದಿರುವದರಿಂದ ಹಾಗೂ ವಾದ ಮಾಡಲು ವಕೀಲರನ್ನು ನೇಮಕ ಮಾಡಲು ಸಾಮಥ್ರ್ಯ ಇಲ್ಲದ್ದರಿಂದ ಪ್ರಕರಣದ ವಾದ ಮಾಡಲು ಉಚಿತ ಕಾನೂನು ನೆರವು ಕೋರಿ ನ್ಯಾಯಾಧೀಶರ ಮುಂದೆ ಬಿನ್ನವಿಸಿಕೊಂಡಿದ್ದ ಮೇರೆಗೆ ಜಿಲ್ಲಾ ಕಾನೂನು ನೆರವು ಸಮಿತಿಯ ವಕೀಲ ಕೀತಿಯಂಡ ಸಿ. ಪ್ರದ್ಯುಮ್ನ ಅವರನ್ನು ನೇಮಕ ಮಾಡಿತ್ತು.