ಮಡಿಕೇರಿ, ಮಾ. 8: ಮಡಿಕೇರಿಯ ಖ್ಯಾತ ಪ್ರವಾಸಿ ತಾಣವಾದ ರಾಜಾಸೀಟ್‍ನಲ್ಲಿ ಎರಡು ವರ್ಷಗಳಿಂದ ನಡೆಯದಿರುವ ಫಲಪುಷ್ಪ ಪ್ರದರ್ಶನಕ್ಕೆ ನಕಲಿ ಬಿಲ್ ಮೂಲಕ ರೂ. 8 ಲಕ್ಷದಷ್ಟು ಹಣವನ್ನು ಸಂಬಂಧಿಸಿದ ಅಧಿಕಾರಿಗಳು ಲಪಟಾಯಿಸಿರುವದು ಇದೀಗ ಬಟ್ಟಾಬಯಲಾಗಿದೆ. ಮಾಧ್ಯಮಗಳಲ್ಲಿ ಈ ಸ್ಫೋಟಕ ಮಾಹಿತಿ ಪ್ರಕಟಗೊಂಡ ಬಳಿಕ ಹೀಗೂ ನಡೆಯುತ್ತದೆಯೇ... ಎಂದು ಜನತೆ ಅಚ್ಚರಿ ಪಡುವಂತಾಗಿದೆ. ಈ ಕುರಿತು ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಯಿಂದ ಸೂಕ್ತ ಮಾಹಿತಿ ನೀಡಲು ಸೂಚಿಸಿರುವ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವವದಾಗಿ ತಿಳಿಸಿದ್ದಾರೆ.
ಬಿಲ್ ಸೃಷ್ಟಿಗೆ ಕೈಚಳಕ
ಒಂದು ವರ್ಷವಲ್ಲ... ಸತತ ಎರಡು ವರ್ಷ ಫಲಪುಷ್ಪ ಪ್ರದರ್ಶನ ನಡೆದಿಲ್ಲ. ಆದರೆ ಇದಕ್ಕೆ ಏನೇನೋ ಸಬೂಬು ನೀಡಿ ಜನತೆಯನ್ನು ಕತ್ತಲಿನಲ್ಲಿ ಇಟ್ಟ ಹಿಂದಿನ ಹಿರಿಯ ತೋಟಗಾರಿಕಾ ಉಪನಿರ್ದೇಶಕ ಸುಧೀಂದ್ರಕುಮಾರ್ ಕಡತದಲ್ಲಿ ಮಾತ್ರ ದಾಖಲೆ ತೋರಿ ಜನರ ಕಿವಿಗೆ ಹೂ (!) ಮುಡಿಸಿದ್ದಾರೆ.
ಬಹುತೇಕ ಬಿಲ್‍ಗಳನ್ನು ರೂ. 1 ಲಕ್ಷ ಮೀರದಂತೆ (ಉದಾ: ರೂ. 99,981, ರೂ. 99,983) ತೋರಿಸ ಲಾಗಿದೆ. ಕೆಲವು ಬಿಲ್‍ಗಳನ್ನು ಟೆಂಡರ್ ಮೂಲಕ ಅನುಮೋದಿಸಿರುವಂತೆ ಉಲ್ಲೇಖಿಸಲಾಗಿದೆಯಾದರೂ ಟೆಂಡರ್ ಕರೆದಿರುವ ಸಾಧ್ಯತೆಗಳಿಲ್ಲ. ಸಂಬಂಧಿಸಿದ ವಹಿವಾಟು ನಡೆಸದ ವ್ಯಕ್ತಿ, ಸಂಸ್ಥೆಗಳಿಂದ ಅಗತ್ಯ ಸಾಮಗ್ರಿ ಪಡೆದಿರುವಂತೆ ದಾಖಲೆ ಕಂಡು ಬಂದಿದೆ. ಲಂಪಟ ಅಧಿಕಾರಿಯ ಜಾಣ ನಡೆಗೆ ಜಿಲ್ಲೆಯ ಕೆಲವು ಉದ್ಯಮಿಗಳು ಹಾಗೂ ಹೊರ ಜಿಲ್ಲೆಯ ವ್ಯಕ್ತಿಗಳು ಅಥವಾ ಸಂಸ್ಥೆಗಳು ಸಹಕರಿಸಿದ್ದಾರೆಯೇ... ಇದರಿಂದ ಇವರಿಗೆ ಏನು ಲಾಭವಾಗಿದೆ... ಇದರಲ್ಲಿ ಹಿಂದಿನ ಹಿರಿಯ ಅಧಿಕಾರಿಗಳ ಪಾತ್ರವಿಲ್ಲವೇ... ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ.
ಫಲಪುಷ್ಪ ಪ್ರದರ್ಶನ ಸಾಮಾನ್ಯ ವಾಗಿ ಏಪ್ರಿಲ್ ಅಂತ್ಯ ಅಥವಾ ಮೇಯಲ್ಲಿ ನಡೆಯುತ್ತಿತ್ತು. 2015ರಲ್ಲಿ ಫೆಬ್ರವರಿ 28ರ ದಿನಾಂಕವಿರುವ ಟಿನ್‍ನಂಬರ್ ಇರುವ ಬಿಲ್‍ವೊಂದಕ್ಕೆ ಉಗ್ರಾಣ ಇಲಾಖೆಯಿಂದ ಅನು ಮೋದನೆಯಾಗಿರುವ ಪ್ರಕಾರ ಟೆಂಡರ್ ಮುಖಾಂತರ ದರ ಕರೆದು ಒಪ್ಪಿಗೆ ಯಾಗಿರುವದರಿಂದ ನೀಡಲಾಗಿದೆ ಎಂದು ತೋರಿಸ ಲಾಗಿದೆ. ಮದೆನಾಡಿನ ಜಗದೀಶ್ ಕೆ.ಎ. ಎಂಬವರ ಮಾಲೀಕತ್ವದ ಹೈವೇ ನರ್ಸರಿ ಅಂಡ್ ಫ್ಲವರ್ ಸಪ್ಲೈಯರ್ಸ್ ಹೆಸರಿನ ಸಂಸ್ಥೆಯಿಂದ ವಿವಿಧ ಬಗೆಯ ಹೂಗಿಡಗಳನ್ನು ಖರೀದಿಸಿದ ಮೊತ್ತ ರೂ. 99,981ರಷ್ಟಿದೆ. ಇದೇ ದಿನಾಂಕವಿರುವ ಮತ್ತೊಂದು ಬಿಲ್ ಮಡಿಕೇರಿಯ ಉತ್ತಮ್ ಸ್ಟೋರ್‍ಗೆ ಸೇರಿದ್ದು, ರೂ. 1 ಸಾವಿರ ಮೌಲ್ಯದ ನೆನಪಿನ ಕಾಣಿಕೆ (ಒಂದಕ್ಕೆ), ಬಹು ಮಾನ ಹಾಗೂ ಬ್ಯಾಡ್ಜ್ ಖರೀದಿ ಸಿರುವಂತೆ ಈ ಬಿಲ್ ತೋರಿಸ ಲಾಗಿದ್ದು, ಇದರ ಮೊತ್ತ ರೂ. 49,250. ಹಣ್ಣು ಮತ್ತು ತರಕಾರಿ ಖರೀದಿಸಿರುವಂತೆ 2015ರ ಮಾರ್ಚ್ 9ರ ದಿನಾಂಕದ ಮತ್ತೊಂದು ಬಿಲ್‍ನ ಮೊತ್ತ ರೂ. 40, ಸಾವಿರ, ಹೆರವನಾಡು ಬೆಟ್ಟಗೇರಿಯ ಮೇದಪ್ಪ ಹಣ್ಣು ತರಕಾರಿ ಸರಬರಾಜುದಾರರು ಎಂಬ ಹೆಸರಿನ ಬಿಲ್‍ನಲ್ಲಿ (ಟಿನ್ ನಂಬರ್ ಇಲ್ಲ) ಕಲ್ಲಂಗಡಿ, ಕರಬೂಜ ಸೇರಿದಂತೆ ವಿವಿಧ ಹಣ್ಣು- ತರಕಾರಿಗೆ ಇಂತಿಷ್ಟು ಎಂಬ ಉಲ್ಲೇಖವಿದೆ. 1.3.2016ರ ದಿನಾಂಕದ ಇನ್ನೊಂದು ಬಿಲ್ ಬೆಂಗಳೂರಿನ ಕೇತೋಹಳ್ಳಿ, ಚುಂಚನಕುಪ್ಪೆಯ ಶಶಿಧರ್ ಗಾರ್ಡನ್ ಅಂಡ್ ನರ್ಸರಿ ಹೆಸರಿನದ್ದು. ವಿವಿಧ ಕಲಾಕೃತಿ ಮಾದರಿಯ ಹೂ ಜೋಡಣೆ ಮಾಡಿದ ವೆಚ್ಚದ ಬಾಬ್ತಿಗೆ ಮಂಜೂರಾತಿ ಎಷ್ಟು ಗೊತ್ತೇ... ರೂ. 59,955. 1.3.2016ರ ದಿನಾಂಕದ ಟಿನ್ ನಂಬರ್ ಇಲ್ಲದ ಮತ್ತೊಂದು ಬಿಲ್ ‘ಶಾಕ್' ನೀಡುತ್ತದೆ. ಫಲ- ಪುಷ್ಪ ಪ್ರದರ್ಶನಕ್ಕೆ ಹೂಗಿಡಗಳನ್ನು ಖರೀದಿಸಿದ ಹಣ ಬರೋಬ್ಬರಿ ರೂ. 99,983ರಷ್ಟು ಅಚ್ಚರಿ ಎಂದರೆ ಈ ಬಿಲ್ ಕೂಡ ಹೆರವನಾಡಿನ ಬಿ.ಎಂ. ಮೇದಪ್ಪ ಅವರ ಹೆಸರಿನಲ್ಲಿದ್ದು, ಸಂಸ್ಥೆಯ ಹೆಸರು ರೇರ್ ಪ್ಲಾಂಟ್ ಅಂಡ್ ಫ್ಲವರ್ ನರ್ಸರಿ ಎಂದಿದೆ.
28.2.2016ರ ದಿನಾಂಕದ ಇನ್ನೊಂದು ಬಿಲ್ ಸಹ ಮದೆನಾಡಿನ ಜಗದೀಶ್ ಕೆ.ಎ. ಎಂಬವರ ಹೆಸರಿ ನಲ್ಲಿದ್ದು, ಹೂ ಕುಂಡ ಖರೀದಿಸಿದ ವೆಚ್ಚ ರೂ. 39,900 ಎಂದಿದೆ.
15.2.2016ರ ದಿನಾಂಕದ ಇನ್ನೊಂದು ಬಿಲ್ ಬಲಮುರಿಯ ಪಿ.ಎಸ್. ಮದುಸೂದನ್ ಮಾಲೀಕತ್ವ ದ ಒಯಸಿಸ್, ಪ್ಲಾಂಟ್ ಅಂಡ್ ಫ್ಲವರ್ ನರ್ಸರಿ ಹೆಸರಲ್ಲಿದೆ. ವಿವಿಧ ಕಲಾಕೃತಿ ಮಾದರಿಯ ಹೂ ಜೋಡಣೆ ಮಾಡಿರುವಂತೆ ತೋರಿರುವ ಈ ಬಿಲ್‍ನ ಮೊತ್ತ ರೂ. 99,975(!) ಮಾತ್ರ.
ಈ ಹಗಲು ದರೋಡೆಯ ವಿದ್ಯುತ್ ದೀಪಾಲಂಕಾರದ ವೆಚ್ಚವೆಷ್ಟು ಗೊತ್ತೇ? ಕೇವಲ ರೂ. 60 ಸಾವಿರ. 11.3.2015 ದಿನಾಂಕದ ಈ ಬಿಲ್ ಇರುವದು ಮಡಿಕೇರಿಯ ಓಂಕಾರ್ ಡೆಕೋರೇಟರ್ಸ್ ಹೆಸರಿನಲ್ಲಿ 12.3.2015ರ ದಿನಾಂಕದ ಇನ್ನೊಂದು ಬಿಲ್ ಇರುವದು ಕೂಡ ಮದೆನಾಡಿನ ಜಗದೀಶ್ ಕೆ.ಎ. ಅವರ ಹೈವೇ ನರ್ಸರಿ ಅಂಡ್ ಫ್ಲವರ್ ಸಪ್ಲೈಯರ್ಸ್ ಹೆಸರಿನಲ್ಲಿ. ಪ್ರದರ್ಶನಕ್ಕೆ ಅಲಂಕಾರಿಕ ಹೂವಿನ ಬೀಜ ಸರಬರಾಜು ಮಾಡಿದಂತಿರುವ ಈ ಬಿಲ್‍ನ ಮೊತ್ತ ರೂ. 50,750. ಟೆಂಡರ್ ಮುಖಾಂತರ ದರ ಒಪ್ಪಿಗೆಯಾಗಿದೆ ಎಂದು ಇದರಲ್ಲಿ ತೋರಲಾಗಿದೆ.
12.3.2015ರ ದಿನಾಂಕದ ಇನ್ನೊಂದು ಬಿಲ್ ಕೂಡ ಮದೆನಾಡಿನ ಜಗದೀಶ್ ಕೆ.ಎ. ಅವರ ಹೈವೇ ನರ್ಸರಿ ಅಂಡ್ ಫ್ಲವರ್ ಸಪ್ಲೈಯರ್ಸ್ ಹೆಸರಿನಲ್ಲಿ. ಅಲಂಕಾರಿಕ ಕಲಾಕೃತಿ ಹೂಗಳ ಜೋಡಣೆಗೆ ಮಾಡಿದ ವೆಚ್ಚ ರೂ. 99,650 ಅಂತೆ.
ಯಾರದೋ ದುಡ್ಡು
ಯಲ್ಲಮ್ಮನ ಜಾತ್ರೆ.