ಮಡಿಕೇರಿ, ಮಾ. 8: ಕೊಡಗು ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರ ದಿಢೀರ್ ಬದಲಾವಣೆ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಮೂಡಿಸಿದ್ದು, ಹಲವು ಪ್ರಮುಖರು ಸಭೆ ನಡೆಸಿ, ಚರ್ಚಿಸಿ, ಬದಲಾವಣೆ ಬಗ್ಗೆ ಪುನರ್ ಪರಿಶೀಲಿಸುವಂತೆ ಮನವಿ ಮಾಡುವ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ವರಿಷ್ಠರನ್ನು ಭೇಟಿ ಮಾಡಲು ರಾಜಧಾನಿಗೆ ತೆರಳಿದ್ದಾರೆ.ಕಳೆದ 6 ತಿಂಗಳ ಹಿಂದೆಯಷ್ಟೇ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿದ್ದ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರನ್ನು ನಿನ್ನೆ ದಿನ ರಾಜ್ಯದ ವರಿಷ್ಠರು ದಿಢೀರ್ ಬದಲಾವಣೆ ಮಾಡಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ, ಯುವ ಮೋರ್ಚಾದಲ್ಲಿ ಗುರುತಿಸಿಕೊಂಡಿದ್ದ ಯುವ ಮುಂದಾಳು ಬಿ.ಬಿ. ಭಾರತೀಶ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಈ ದಿಢೀರ್ ಬದಲಾವಣೆ ಜಿಲ್ಲಾ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಅಧ್ಯಕ್ಷರಾಗಿದ್ದ ಮನುಮುತ್ತಪ್ಪ ಹಾಗೂ ನೂತನವಾಗಿ ಅಧ್ಯಕ್ಷರಾಗಿರುವ ಭಾರತೀಶ್ ಅವರಿಗೂ, ಬಿಜೆಪಿ ಪ್ರಮುಖರಿಗ್ಯಾರಿಗೂ ಗಮನಕ್ಕೆ ಬಾರದಂತೆ ಬದಲಾವಣೆ ಮಾಡಿರುವದು ಅಚ್ಚರಿ ಮೂಡಿಸಿದೆ.
ಈ ದೀಢೀರ್ ಬದಲಾವಣೆ ಬಗ್ಗೆ ಅಸಮಾಧಾನಿತರಾಗಿರುವ ಜಿಲ್ಲಾ ಪಂಚಾಯತ್‍ನ ಕೆಲವು ಸದಸ್ಯರುಗಳು, ಬಿಜೆಪಿ ಮುಖಂಡರುಗಳು ಜಿ.ಪಂ. ಅಧ್ಯಕ್ಷರ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಬೆಳಿಗ್ಗೆ 8.30ಕ್ಕೆ ಸಭೆ ನಡೆದಿದ್ದು, ಆಹ್ವಾನವಿದ್ದ ಜಿ.ಪಂ. ಸದಸ್ಯರುಗಳು, ಪ್ರಮುಖರು ಪಾಲ್ಗೊಂಡಿದ್ದಾರೆ. ಕೆಲವು ಸದಸ್ಯರುಗಳಿಗೆ ಯಾವದೇ ಮಾಹಿತಿ ನೀಡಲಿಲ್ಲವೆನ್ನಲಾಗಿದೆ. ಇನ್ನು ಕೆಲವರು ಸಮಯಕ್ಕೆ ಸರಿಯಾಗಿ ಬಂದವರು ಸಭೆ ತಡವಾದ್ದರಿಂದ ವಾಪಸ್ ತೆರಳಿದ್ದಾರೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸ್ಥಾಯಿ ಸಮಿತಿ ಸದಸ್ಯರುಗಳಾದ ಶ್ರೀನಿವಾಸ್, ಶಶಿಸುಬ್ರಮಣಿ, ವಿಜುಸುಬ್ರಮಣಿ, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಬಾಲಚಂದ್ರ ಕಳಗಿ, ವಿ.ಕೆ. ಲೋಕೇಶ್, ಕೊಮಾರಪ್ಪ, ಅರುಣ್ ಭೀಮಯ್ಯ, ತಳೂರು ಕಿಶೋರ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ರವಿಬಸಪ್ಪ ಸೇರಿದಂತೆ ಇತರ ಪ್ರಮುಖರು ಪಾಲ್ಗೊಂಡಿದ್ದಾಗಿ ಗೊತ್ತಾಗಿದೆ. ಅಧ್ಯಕ್ಷರಾಗಿದ್ದ ಮನುಮುತ್ತಪ್ಪ
(ಮೊದಲ ಪುಟದಿಂದ) ಅವರು ಸಂಘಟನೆಯತ್ತ ಮುತುವರ್ಜಿ ವಹಿಸಿದ್ದು, ರಾಜ್ಯ ವರಿಷ್ಠರ ಸೂಚನೆ ಪಾಲನೆ ಮಾಡುತ್ತಾ, ಪಕ್ಷ ಬೆಳೆಸುವತ್ತ ಚಿಂತನೆ ಹರಿಸಿದ್ದಾಗಿ ಸಮರ್ಥಿಸುತ್ತಾ, ಇಂತಹ ಸಂದರ್ಭದಲ್ಲಿ ದಿಢೀರ್ ಬದಲಾವಣೆ ಮಾಡಿರುವ ಬಗ್ಗೆ ಪುನರ್ ಪರಿಶೀಲನೆ ಮಾಡುವಂತೆ ರಾಜ್ಯ ವರಿಷ್ಠರಲ್ಲಿ ಮನವಿ ಮಾಡಿಕೊಳ್ಳುವಂತೆ ತೀರ್ಮಾನಿಸಿದ್ದಾರೆ. ಅದರಂತೆ ಇಂದು ರಾತ್ರಿಯೇ ವಿಶೇಷ ಬಸ್‍ನಲ್ಲಿ ಜಿ.ಪಂ. ಪ್ರತಿನಿಧಿಗಳಾದಿಯಾಗಿ ಪ್ರಮುಖರು ಸೇರಿ ಒಟ್ಟು 40 ಮಂದಿ ರಾಜಧಾನಿಗೆ ಪ್ರಯಾಣ ಬೆಳೆಸಿದ್ದಾರೆ.
ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಸಂಸದ ಅನಂತ್ ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಅವರುಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿರುವದಾಗಿ ತಿಳಿದುಬಂದಿದೆ. -ಕುಡೆಕಲ್ ಸಂತೋಷ್.