ಕುಶಾಲನಗರ, ಮಾ. 8: ಗುರು ಹಿರಿಯರು ನೀಡುವ ಮಾರ್ಗದರ್ಶನ ವನ್ನು ಪಡೆದುಕೊಂಡು ನಾಯಕತ್ವಗುಣ ಗಳನ್ನು ವಿದ್ಯಾರ್ಥಿಗಳು ಬೆಳಸಿ ಕೊಂಡಾಗ ಮಾತ್ರ ಬದುಕಿನಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವೆಂದು ಕುಶಾಲನಗರದ ಹೋಟೆಲ್ ಮಿನಿಸ್ಟ್ರಿ ಕೋರ್ಟ್ ಮಾಲೀಕ ಎಂ.ಎ. ರಘು ತಿಳಿಸಿದರು.

ಚಿಕ್ಕಅಳುವಾರದ ಮಂಗಳೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿ ವಾಣಿಜ್ಯ ಅಧ್ಯಯನ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉದ್ಭವ್-2017 ವಾಣಿಜ್ಯ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ವಿಶ್ವ ವಿದ್ಯಾನಿಲಯದ ವಾಣಿಜ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ವೈ. ಮುನಿಸ್ವಾಮಿ ಮಾತನಾಡಿ, ಮೌಲ್ಯಯುತ ಚಿಂತನೆ, ಮೌಲ್ಯಯುತ ನಿರ್ಧಾರ ತೆಗೆದುಕೊಳ್ಳುವದು ವಿದ್ಯಾರ್ಥಿ ಬದುಕಿನಲ್ಲಿ ಬಹು ಮುಖ್ಯವಾದ ಅಂಶವಾಗಿದೆ ಎಂದರು.

ಚಿಕ್ಕಅಳುವಾರದಲ್ಲಿರುವ ಮಂಗಳೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ವಿ. ರವೀಂದ್ರಚಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಪದವಿ ಹಂತದ ವಿದ್ಯಾರ್ಥಿಗಳಿಗಾಗಿ ವಾಣಿಜ್ಯಹಬ್ಬ ಕಾರ್ಯಕ್ರಮದಲ್ಲಿ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ತಂಡಗಳು ಪಾಲ್ಗೊಂಡಿರುವದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ಅಧ್ಯಯನ ವಿಭಾಗದ ಉಪನ್ಯಾಸಕರು ಗಳಾದ ಮೊಹಮ್ಮದ್ ಇರ್ಷಾದ್, ಸಂಗೀತ ಎಂ. ಬಿದ್ದಪ್ಪ, ಮೇಕಂಡ ಪಿ. ಗೀತಾಂಜಲಿ, ಪ್ರಸನ್ನ, ವಾಣಿಜ್ಯ ಸಂಘದ ಅಧ್ಯಕ್ಷ ಜೆ.ದುರ್ಗೇಶ್, ಉಪಾಧ್ಯಕ್ಷ ರಾಜೇಶ್, ಬೋಧಕ ವೃಂದ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ದ್ವಿತೀಯ ಎಂಕಾಂ ವಿದ್ಯಾರ್ಥಿನಿ ಗಾಯತ್ರಿ, ಪ್ರಾರ್ಥನೆಯನ್ನು ಅಕಿಲಾ ನೆರವೇರಿಸಿದರು.

ಸಮಾರೋಪ: ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿರುವಂತಹ ಜಿಲ್ಲಾ ಮಟ್ಟದ ಅಂತರ್ ಕಾಲೇಜು ವಾಣಿಜ್ಯ ಹಬ್ಬ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದ ಸ್ನಾತಕೋತ್ತರ ಕೇಂದ್ರದಲ್ಲಿ ನಡೆಸುತ್ತಿರುವದು ಒಂದು ಉತ್ತಮ ಬೆಳವಣಿಗೆ ಎಂದು ಐ.ಎನ್.ಟಿ.ಯು.ಸಿ. ಉಪಾಧ್ಯಕ್ಷ ಎನ್.ಎಂ. ಮುತ್ತಪ್ಪ ತಿಳಿಸಿದರು.

ಚಿಕ್ಕಅಳುವಾರದಲ್ಲಿರುವ ಮಂಗಳೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿ ವಾಣಿಜ್ಯ ಅಧ್ಯಯನ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉದ್ಭವ್-2017 ವಾಣಿಜ್ಯ ಹಬ್ಬದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಉದ್ಭವ್-2017 ವಾಣಿಜ್ಯ ಹಬ್ಬ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯಲ್ಲಿನ ಒಟ್ಟು 14 ಕಾಲೇಜುಗಳಿಂದ ವಿದ್ಯಾರ್ಥಿಗಳ ತಂಡ ಆಗಮಿಸಿದ್ದವು. ಹಣಕಾಸು, ಮಾರ್ಕೆಟಿಂಗ್, ವ್ಯಾವಹಾರಿಕ, ನಿಧಿ ಹುಡುಕುವ ಹಾಗೂ ಉತ್ತಮ ವ್ಯವಸ್ಥಾಪಕ ಎಂಬ ಒಟ್ಟು ಐದು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಎಲ್ಲಾ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಮಡಿಕೇರಿಯ ಎಫ್.ಎಂ.ಕೆ.ಎಂ.ಸಿ. ವಿದ್ಯಾರ್ಥಿಗಳ ತಂಡ ಸಮಗ್ರ ಪ್ರಶಸ್ತಿ ಬಾಚಿಕೊಂಡರೆ, ಸೋಮವಾರಪೇಟೆಯ ಸೈಂಟ್ ಜೋಸೆಫ್ ಕಾಲೇಜು ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿತ್ತು. ವಿಜೇತರಿಗೆ ಬಹುಮಾನ ನೀಡಲಾಯಿತು.