ತಾ. 4ರ ಸಂಜೆ ‘‘ಶಕ್ತಿ’’ಯ 60ನೇ ಹುಟ್ಟುಹಬ್ಬದ ಕಾರ್ಯಕ್ರಮಗಳ ಮುಂದುವರೆದ ಭಾಗ ಆರಂಭವಾಗಿತ್ತು.

ಕೈಯಲ್ಲಿ ಪ್ಲಾಸ್ಟಿಕ್ ಕವರ್ ಹಿಡಿದು ಬಂದ ಸ್ನೇಹಿತರೊಬ್ಬರು ಅದರೊಳಗಿನ ಪತ್ರಿಕೆಯನ್ನು ತೋರಿಸಿದರು. ಅದು 4-11-1958ನೇ ಇಸವಿಯ ಶಕ್ತಿ ಪತ್ರಿಕೆಯಾಗಿತ್ತು ಕಲ್ಪನೆಯಲ್ಲೂ ನಿರೀಕ್ಷಿಸದ ಕೊಡುಗೆ ಯೊಂದನ್ನು ನೀಡಿದ್ದು ನಮ್ಮ ಅತ್ಮೀಯ ಸ್ನೇಹಿತರೊಬ್ಬರಾದ ಬೆಟ್ಟತ್ತೂರಿನ ಆಪಾಡಂಡ ಕೌಂಡಿ ತಮ್ಮಯ್ಯ ದಂಪತಿಗಳು.

ಸುಮಾರು 59 ವರ್ಷಗಳ ಹಿಂದಿನ ಕಾಗದ ಪತ್ರಗಳನ್ನು ಶೇಖರಿಸಿಟ್ಟಿದ್ದರು. ಯಾವದೇ ಸುಕ್ಕಿಲ್ಲ, ಹರಿದಿಲ್ಲ. ಈಗಿನ ‘ಶಕ್ತಿಯಂತೆಯೇ ಗÀಟ್ಟಿಮುಟ್ಟಾಗಿ ನೆರೆದಿದ್ದವರಿಗೂ ಆಶ್ಚರ್ಯ ತರುವ ರೀತಿಯಲ್ಲಿ ಅವುಗಳನ್ನು ಶೇಖರಿಸಿಡ ಲಾಗಿತ್ತು. ಪತ್ರಿಕೆಯನ್ನು ಕೊಡುಗೆ ಯಾಗಿ ನೀಡಿದ ಕೌಂಡಿಯವರನ್ನು ಸ್ನೇಹಿತ ಮುನೀರ್ ಕಿಚಾಯಿಸದೆ ಬಿಡಲಿಲ್ಲ. 50 ವರ್ಷಕ್ಕೂ ಹಿಂದಿನ ಸಂಚಿಕೆಗೆ ಕನಿಷ್ಟ 1,00,000 ರೂಪಾಯಿ ‘ಬೆಲೆ ಕಟ್ಟಬೇಕಿತ್ತು’ ಎಂದರು.

58ರಲ್ಲಿ ಶಕ್ತಿ ಪತ್ರಿಕೆಗೆ 7 ಪೈಸೆ

ತೆಂಗಿನಕಾಯಿ ದರ 24 ಪೈಸೆ

4-11-1958ರ ಶಕ್ತಿ ಪತ್ರಿಕೆಯ ಕೊನೆ ಪುಟದಲ್ಲಿ ಪೇಟೆ ಧಾರಣೆ ಪ್ರಕಟಗೊಂಡಿತ್ತು. ಮೊದಲ ದಿನದ ದರದಂತೆ ಸಾವಿರ ತೆಂಗಿನ ಕಾಯಿಗೆ ರೂ. 240 ಎಂದಿತ್ತು. ಸಣ್ಣಕ್ಕಿಗೆ ಕೆ.ಜಿ.ಗೆ 70 ಪೈಸೆ, ಕುಸಲಕ್ಕಿಗೆ 48 ಪೈಸೆ ಧಾರಣೆ ಇತ್ತು. ಕೌಂಡಿ ಮಾತ್ರ ನಿರ್ಲಿಪ್ತ ಪ್ರಜ್ಞೆಯಲ್ಲೇ ಇದ್ದರು. ಕೊಡುಗೆಯನ್ನು ಸ್ವೀಕರಿಸಿದ ‘ಶಕ್ತಿ‘ ಕುಟುಂಬ ಮಾತ್ರ ಈ ಅಪೂರ್ವ ಆಸ್ತಿಗೆ ಲಕ್ಷವೂ ಅಲ್ಲ, ಕೋಟಿಯಲ್ಲೂ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬ ಕೃತಜ್ಞತೆಯಲ್ಲಿ ಇದನ್ನು ಅಪೂರ್ವ ಸಂಗ್ರಹದ ಪಟ್ಟಿಗೆ ಸೇರಿಸಿತು.