ಮಡಿಕೇರಿ, ಮಾ. 8: ಕರ್ನಾಟಕ ಪದವಿಪೂರ್ವ ಶಿಕ್ಷಣ ಮಂಡಳಿಯಿಂದ ತಾ. 9 ರಿಂದ (ಇಂದು) ರಾಜ್ಯದೆಲ್ಲೆಡೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಯಲಿದೆ. ಕೊಡಗು ಜಿಲ್ಲೆಯ 16 ಕೇಂದ್ರಗಳಲ್ಲಿ ಒಟ್ಟು 6524 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ಟಿ. ಸ್ವಾಮಿ ಅವರು ಖಚಿತಪಡಿಸಿದ್ದಾರೆ.

ಪ್ರಾರಂಭ ದಿನವಾದ ಇಂದು ಜೀವಶಾಸ್ತ್ರ ಹಾಗೂ ಇತಿಹಾಸ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯ 16 ಪರೀಕ್ಷಾ ಕೇಂದ್ರಗಳಿಂದ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯೊಂದಿಗೆ ಮುಂಜಾಗ್ರತ ಕ್ರಮವಾಗಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿರುವದಾಗಿಯೂ ಅವರು ತಿಳಿಸಿದ್ದಾರೆ.

ಸಮಯ ಬದಲಾವಣೆ : ಪ್ರಸಕ್ತ ವರ್ಷದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ತೊಂದರೆ ಯಾಗದಂತೆ ಪರೀಕ್ಷಾ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಿಗ್ಗೆ 9 ರಿಂದ 12.15ರ ಅವಧಿಯನ್ನು ಬದಲಾಯಿಸಿ ಯಾರಿಗೂ ತೊಂದರೆ ಆಗದಂತೆ ಪ್ರತಿದಿನ ಬೆಳಿಗ್ಗೆ 10.15 ರಿಂದ 1.30ರ ತನಕ ಮಾರ್ಪಾಡು ಗೊಳಿಸಿದ್ದು, ಈ ಅಂಶವನ್ನು ಮಕ್ಕಳು ಹಾಗೂ ಪೋಷಕರು ಗಮನಿಸುವಂತೆ ಸಲಹೆ ನೀಡಿದ್ದಾರೆ.

ಈ ಹಿಂದೆ ತಾಲೂಕು ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ವಿತರಿಸುತ್ತಿದ್ದು, ಸರಕಾರದ ನಿರ್ದೇಶನದಂತೆ ಈ ವರ್ಷದಿಂದ ನೇರವಾಗಿ ಜಿಲ್ಲಾ ಕೇಂದ್ರದಿಂದಲೇ ವಿತರಣಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಉಪನಿರ್ದೇಶಕರು ತಿಳಿಸಿದ್ದಾರೆ.

ಮಡಿಕೇರಿ : ತಾಲೂಕಿನಲ್ಲಿ ಜಿಲ್ಲಾ ಕೇಂದ್ರದಲ್ಲಿರುವ ಸರಕಾರಿ ಪ.ಪೂ. ಕಾಲೇಜು, ಸಂತ ಮೈಕಲರ ವಿದ್ಯಾಲಯ,

(ಮೊದಲ ಪುಟದಿಂದ) ನಾಪೋಕ್ಲು ಪ.ಪೂ. ಕಾಲೇಜು, ಚೇರಂಬಾಣೆ ಅರುಣ ಕಾಲೇಜು, ಮೂರ್ನಾಡು ಪ.ಪೂ. ಕಾಲೇಜಿನಲ್ಲಿ ಪರೀಕ್ಷೆಗಳನ್ನು ಆಯೋಜಿಸಿದೆ.

ಸೋಮವಾರಪೇಟೆ : ಪಟ್ಟಣದ ಸ.ಪ.ಪೂ. ಕಾಲೇಜು, ಕುಶಾಲನಗರ ಪ.ಪೂ. ಕಾಲೇಜು, ಕೂಡಿಗೆ ಪ.ಪೂ. ಕಾಲೇಜು, ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆ, ಕೊಡ್ಲಿಪೇಟೆ ಹಾಗೂ ನೆಲ್ಲಿಹುದಿಕೇರಿ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ವೀರಾಜಪೇಟೆ : ಪಟ್ಟಣದ ಸಂತ ಅನ್ನಮ್ಮ ಪ.ಪೂ. ಕಾಲೇಜು, ಸರಕಾರಿ ಪ.ಪೂ. ಕಾಲೇಜು, ಗೋಣಿಕೊಪ್ಪಲು ಪ.ಪೂ. ಕಾಲೇಜು, ಪೊನ್ನಂಪೇಟೆ ಸರಕಾರಿ ಪ.ಪೂ. ಕಾಲೇಜು ಹಾಗೂ ಶ್ರೀಮಂಗಲ ಪ.ಪೂ. ಕಾಲೇಜು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಪ್ರಸಕ್ತ ಸಾಲಿನಲ್ಲಿ ವಿಶೇಷ ಭದ್ರತೆಯೊಂದಿಗೆ ಮುಂಜಾಗ್ರತಾ ಕ್ರಮವಾಗಿ ಆಯಾ ಕೇಂದ್ರಗಳಿಗೆ ಸಿ.ಸಿ. ಕ್ಯಾಮಾರಗಳನ್ನು ಅಳವಡಿಸಲು ಪ್ರಯತ್ನಿಸಿದ್ದು, ತಾ. 27ರವರೆಗೆ ದ್ವಿತೀಯ ಪಿ.ಯು.ಸಿ. ಪರೀಕ್ಷೆ ಮುಂದುವರಿಯಲಿದೆ ಎಂದು ಉಪನಿರ್ದೇಶಕರು ಸ್ಪಷ್ಪಪಡಿಸಿದ್ದಾರೆ.