ಸೋಮವಾರಪೇಟೆ, ಮಾ.8: ‘ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ’ ಎಂಬ ಮಾತಿದೆ. ಇತ್ತೀಚಿನ ದಿನಗಳಲ್ಲಂತೂ ಮೊಬೈಲ್ ಕರೆ ಮೂಲಕ ವಂಚಿಸುವ ಅದೆಷ್ಟೋ ಪ್ರಕರಣಗಳು ನಡೆಯುತ್ತಿವೆ. ಈ ಬಗ್ಗೆ ಜಾಗೃತಿ ಮೂಡಿಸುವ ವರದಿಗಳು ಪ್ರಕಟವಾಗುತ್ತಿದ್ದರೂ ಮತ್ತೆ ಮತ್ತೆ ಸಾಮಾನ್ಯ ಜನರು ಮೋಸದ ಜಾಲಕ್ಕೆ ಬೀಳುತ್ತಿದ್ದಾರೆ. ಅಂತಹ ಒಂದು ಘಟನೆ ನಗರದಲ್ಲಿ ನಡೆದಿದೆ.

ಯುವಕನೋರ್ವನ ಮೊಬೈಲ್‍ಗೆ ಕರೆ ಮಾಡಿ ಆತನ ಎಟಿಎಂ ಸಂಖ್ಯೆ ಪಡೆದು 20 ಸಾವಿರ ಹಣ ವಂಚನೆ ಮಾಡಿರುವ ಪ್ರಕರಣ ಬುಧವಾರ ನಡೆದಿದೆ. ಇಲ್ಲಿನ ವಲ್ಲಭಬಾಯಿ ರಸ್ತೆ ನಿವಾಸಿ ಡಿ.ಆರ್. ಮಂಜುನಾಥ್ ಎಂಬವರಿಗೆ ಬುಧವಾರ ಬೆಳಿಗ್ಗೆ ಮೊಬೈಲ್ ಸಂಖ್ಯೆ 8987765866 ಯಿಂದ ದೂರವಾಣಿ ಕರೆ ಮಾಡಿದ ವ್ಯಕ್ತಿ ನಿಮ್ಮ ಎಟಿಎಂ ಸಂಖ್ಯೆ ಚಾಲ್ತಿಯಲ್ಲಿಲ್ಲ. ಅದರ ಅವಧಿ ಮುಗಿದಿದ್ದು, ಬ್ಯಾಂಕ್‍ಗೆ ಎಟಿಎಂ ಸಂಖ್ಯೆ ಅವಶ್ಯಕತೆ ಇರುವದರಿಂದ ಸ್ಪಷ್ಟವಾದ ಮಾಹಿತಿ ನೀಡಿ ಎಂದು ಹಿಂದಿ ಭಾಷೆಯಲ್ಲಿ ವಿವರಣೆ ಕೇಳಿದ್ದಾನೆ.

ಯುವಕ ಮಂಜುನಾಥ್ ತಕ್ಷಣವೇ ತಮ್ಮ ಎಟಿಎಂ ಸಂಖ್ಯೆ ನೀಡಿದ್ದಾರೆ. ಕ್ಷಣ ಮಾತ್ರದಲ್ಲಿ ಇವರ ಮೊಬೈಲ್‍ಗೆ ಬ್ಯಾಂಕ್‍ನಿಂದ ಖಾತ್ರಿ ಸಂಖ್ಯೆ ಬಂದಿದೆ. ಖಾತ್ರಿ ಸಂಖ್ಯೆಯೊಂದಿಗೆ ಆತ ಕೇಳಿದ ಎಲ್ಲಾ ಮಾಹಿತಿ ನೀಡಿದ್ದಾರೆ. ಸ್ವಲ್ಪ ಸಮಯದ ನಂತರ ಎಸ್‍ಬಿಐ ಖಾತೆಯನ್ನು ಪರಿಶೀಲಿಸಿದ ಸಂದರ್ಭ 20 ಸಾವಿರ ಹಣವನ್ನು ಡ್ರಾ ಮಾಡಿಕೊಂಡಿರುವದು ಬೆಳಕಿಗೆ ಬಂದಿದೆ. ಈ ಕುರಿತು ಇಲ್ಲಿನ ಪೊಲೀಸ್ ಠಾಣೆಗೆ ಪುಕಾರು ನೀಡಲಾಗಿದೆ.

ಇಂತಹ ವಂಚನೆಯ ಜಾಲದ ಬಗ್ಗೆ ಆಗಾಗ್ಗೆ ವರದಿಯಾಗುತ್ತಿದ್ದರೂ ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿದಂತೆ ಕಂಡುಬರುತ್ತಿಲ್ಲ. ಬ್ಯಾಂಕ್‍ನವರು ಎಟಿಎಂ ಸಂಬಂಧಿತ ವಿಚಾರಣೆಗಾಗಿ ಯಾವದೇ ಕಾರಣಕ್ಕೂ ಗ್ರಾಹಕರಿಗೆ ಕರೆ ಮಾಡುವದಿಲ್ಲ. ಒಂದು ವೇಳೆ ಎಟಿಎಂನಲ್ಲಿ ದೋಷ ಕಂಡುಬಂದರೆ ಗ್ರಾಹಕರೇ ನೇರವಾಗಿ ಗ್ರಾಹಕರ ಸೇವಾ ಕೇಂದ್ರ ಅಥವಾ ತಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ದೂರು ನೀಡಬಹುದು. ಇದನ್ನು ಹೊರತುಪಡಿಸಿ ತಮ್ಮ ಖಾತೆಯ ವಿವರಗಳನ್ನು ಕರೆ ಮಾಡುವ ಅನಾಮಿಕ ವ್ಯಕ್ತಿಗಳಿಗೆ ನೀಡಿದರೆ ಮೋಸ ಹೋಗುವದಂತೂ ಖಚಿತ. ಇನ್ನಾದರೂ ಇಂತಹ ವಂಚನೆಯ ಜಾಲದ ಕರೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವದು ಒಳಿತು. ಕರೆ ಮಾಡಿದ ವ್ಯಕ್ತಿಯ ಮಾತಿನಲ್ಲಿನ ಸತ್ಯಾಸತ್ಯತೆ ಪರೀಕ್ಷಿಸಲು ತಮ್ಮ ಎಟಿಎಂ ಕಾರ್ಡ್‍ನಲ್ಲಿರುವ ಗ್ರಾಹಕರ ಸೇವಾ ಕೇಂದ್ರ (ಕಸ್ಟಮರ್ ಕೇರ್-ಟೋಲ್ ಫ್ರೀ ಸಂಖ್ಯೆ)ಕ್ಕೆ ಕರೆ ಮಾಡಿ ಖಚಿತಪಡಿಸಿಕೊಂಡರೆ ಉತ್ತಮ. ತಪ್ಪಿದಲ್ಲಿ ಮತ್ತೆ ಮತ್ತೆ ಮೋಸದ ಜಾಲಕ್ಕೆ ಒಳಗಾಗಬೇಕಾದೀತು! - ವಿಜಯ್