ಗೋಣಿಕೊಪ್ಪಲು, ಮಾ.8: ಕಸ್ತೂರಿರಂಗನ್ ವರದಿ ಜಾರಿಯಿಂದ ಪುಟ್ಟಜಿಲ್ಲೆಯಾದ ಕೊಡಗಿನ ಜನವಸತಿ ಪ್ರದೇಶಗಳು, ಕಾಫಿ ತೋಟಗಳು, ಅಭಿವೃದ್ಧಿ ಕಾಮಗಾರಿ, ವಿದ್ಯುತ್‍ಚ್ಛಕ್ತಿ ಮುಂತಾದ ಮೂಲಭೂತ ಸೌಕರ್ಯ ಅನುಷ್ಠಾನಕ್ಕೆ ಅಡ್ಡಿ ಆತಂಕಗಳು ಎದುರಾಗಲಿದ್ದು ದಕ್ಷಿಣ ಕೊಡಗಿನ ಗಡಿಭಾಗ ಕುಟ್ಟದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಒಳಗೊಂಡಂತೆ ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳ ಲಾಗುವದು ಎಂದು ಜೆಡಿಎಸ್ ಪ್ರಮುಖರು ಲಿಖಿತ ಹೇಳಿಕೆಯ ಮೂಲಕ ತಿಳಿಸಿದ್ದಾರೆ.
ಗೋಣಿಕೊಪ್ಪಲಿನಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಆತಂಕ ವ್ಯಕ್ತಪಡಿಸಿದ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಮನೆಯಪಂಡ ಬೆಳ್ಯಪ್ಪ, ಜಿಲ್ಲಾ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಸುರೇಶ್, ಜಿಲ್ಲಾ ಮುಖಂಡರಾದ ತೀತೀರ ಮಂದಣ್ಣ, ಮಚ್ಚಾಮಾಡ ಕಾರ್ಯಪ್ಪ, ಕೋಳೇರ ದಯಾ ಚಂಗಪ್ಪ ಹಾಗೂ ವೀರಜ್ ಅಪ್ಪಚ್ಚು ಅವರು ಜಿಲ್ಲೆಯ ಜನಪ್ರತಿನಿಧಿಗಳು ಸಾಮೂಹಿಕ ರಾಜೀನಾಮೆ ನೀಡಿ ಹೋರಾಟಕ್ಕೆ ಧುಮುಕಲು ಒತ್ತಾಯಿಸಿದ್ದಾರೆ.
ಕಳೆದ ಬಾರಿ ಪಕ್ಷಾತೀತವಾಗಿ ವರದಿ ಜಾರಿ ವಿರುದ್ಧ ಹೋರಾಟ ನಡೆಸಲು ಸರ್ವ ಪಕ್ಷಗಳ ಮುಖಂಡರ, ಸಂಘ ಸಂಸ್ಥೆಗಳ, ಸಾರ್ವಜನಿಕರ ಸಭೆಯನ್ನು ಬಾಳುಗೋಡು ವಿಶ್ವ ಕೊಡವ ಸಾಂಸ್ಕೃತಿಕ ಫೆಡರೇಷನ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಇದೇ ಸಭೆಯಲ್ಲಿ ಜಿಲ್ಲೆಯ ಪ್ರಮುಖ ಜನ ಪ್ರತಿನಿಧಿಗಳು ಸಮಸ್ಯೆಯನ್ನು ಬಗೆಹರಿಸುವದಾಗಿ ಭರವಸೆ ನೀಡಿದ್ದರು. ಆದರೆ, ಇದೀಗ ಸಮಸ್ಯೆ ಮತ್ತೆ ಜೀವಂತವಾಗಿದ್ದು ಜಿಲ್ಲೆಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳು ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಜಿಲ್ಲೆಯ ಅಸ್ತಿತ್ವಕ್ಕೆ ಧಕ್ಕೆಯಾಗಿರುವ ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಉಗ್ರ ಸ್ವರೂಪದ ಹೋರಾಟದಲ್ಲಿ ಪಾಲ್ಗೊಳ್ಳಲು ಒತ್ತಾಯಿಸಿದ್ದಾರೆ.
ವರದಿ ಕುರಿತ ಅಭಿಪ್ರಾಯ ಹೀಗಿದೆ:
ಕಸ್ತೂರಿ ರಂಗನ್ ವರದಿ ಜಿಲ್ಲೆಗೆ ಮಾರಕ ಯೋಜನೆಯಾಗಿದ್ದು ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶ ಮತ್ತು ಅದಕ್ಕೆ ಒಳಪಡುವ 55 ಗ್ರಾಮಗಳನ್ನು ಸೂಕ್ಷ್ಮ ಪರಿಸರ ವಲಯವಾಗಿ ಗುರುತಿಸಲಾಗಿದೆ. ಸದರಿ ವಲಯದಿಂದ 10 ಕಿ.ಮೀ. ಅಂತರದ ಎಲ್ಲ ಪ್ರದೇಶವನ್ನೂ ಸೂಕ್ಷ್ಮ ಪರಿಸರ ತಾಣವೆಂದು ಪರಿಗಣಿಸಿ ನಿರ್ಬಂಧ ಹೇರಲಾಗುತ್ತದೆ. ಪರಿಸರ ರಕ್ಷಣೆ ಮತ್ತು ವನ್ಯಜೀವಿ ರಕ್ಷಣೆ ಮಾಡುವ ಉದ್ಧೇಶದಿಂದ ಸದರಿ ಯೋಜನೆಯನ್ನು ಅಳವಡಿಸಲಾಗಿದ್ದು, ಅನುಷ್ಠಾನದಿಂದ ಕೊಡಗಿನ ಬಹುತೇಕ ಗ್ರಾಮ ಮತ್ತು ಪಟ್ಟಣಗಳಿಗೆ ತೊಂದರೆಯಾಗಲಿದೆ. ಕಸ್ತೂರಿ ರಂಗನ್ ವರದಿಯಲ್ಲಿ ಯಾವ ಚಟುವಟಿಕೆಗೆ ಅವಕಾಶ ಮತ್ತು ನಿರ್ಬಂಧ ಹೇರಲಾಗಿದೆ ಎಂಬ ಬಗ್ಗೆ ತಾ.09/02/2011 ರಂದು ಕೇಂದ್ರ ಪರಿಸರ ಖಾತೆಯು 26 ಅಂಶಗಳ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದೆ.
ಇದರಲ್ಲಿ 8 ಅಂಶಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ವಾಣಿಜ್ಯ ಗಣಿಗಾರಿಕೆ, ಮರ ಕತ್ತರಿಸುವ ಗಿರಣಿ, ನೀರು, ಶಬ್ಧ, ಗಾಳಿ, ಮಣ್ಣು ಮಾಲಿನ್ಯವಾಗುವ ಕಾರ್ಖಾನೆ ಸ್ಥಾಪನೆ, ಹೋಟೆಲ್ ಹಾಗೂ ಇತರೆ ವ್ಯಾಪಾರಕ್ಕೆ, ಸೌದೆ ಮಾರಾಟ, ದೊಡ್ಡ ಜಲವಿದ್ಯುತ್ ಯೋಜನೆ ಅನುಷ್ಠಾನ, ಅಪಾಯಕಾರಿ ವಸ್ತು ಬಳಕೆ ಮತ್ತು ಉತ್ಪಾದನೆ, ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಲಘು ವಿಮಾನ, ಬಿಸಿ ಗಾಳಿಯ ಬಲೂನ್ ರಾಷ್ಟ್ರೀಯ ಉದ್ಯಾಯನದ ಮೇಲೆ ಹಾರಾಟವನ್ನು, ಮಾಲಿನ್ಯ ನೀರನ್ನು ನೈಸರ್ಗಿಕ ನೀರಿಗೆ ಅಥವಾ ಜಾಗಕ್ಕೆ ಬಿಡುವದನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಬೇಕಾದ 13 ಅಂಶಗಳೆಂದರೆ ಮರಕಡಿಯುವದು, ಹೋಟೆಲ್ ಮತ್ತು ರೆಸಾರ್ಟ್ ಸ್ಥಾಪನೆ, ಕೃಷಿ ಚಟುವಟಿಕೆ ಬದಲಾವಣೆ ಮಾಡಲು, ನೈಸರ್ಗಿಕ ನೀರನ್ನು ವಾಣಿಜ್ಯ ಉಪಯೋಗಕ್ಕೆ ಬಳಸಲು ಹಾಗೂ ಕೆರೆ, ಬಾವಿಯ ನೀರನ್ನು ಬಳಸಲು (ಕಾಡು ಪ್ರಾಣಿಗಳಿಗೆ ನಿರ್ಬಂಧ ಇಲ್ಲ). ವಿದ್ಯುತ್ ತಂತಿ ಅಳವಡಿಸುವಂತೆ ಇಲ್ಲ. ಭೂಮಿಯ ತಳ ಭಾಗದಲ್ಲಿ ತಂತಿ ಅಳವಡಿಕೆ, ಹೋಟೆಲ್ ಮತ್ತು ಲಾಡ್ಜ್‍ಗಳ ಸುತ್ತ ಬೇಲಿ ಹಾಕುವಂತೆ ಇಲ್ಲ. ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಕೆ, ರಸ್ತೆ ಅಗಲೀಕರಣ, ರಾತ್ರಿ ವೇಳೆ ವಾಹನ ಸಂಚಾರ ಇಲ್ಲ (ವಾಣಿಜ್ಯ ಉದ್ಧೇಶಕ್ಕೆ), ಆಮದು ಮಾಡಿದ ಸಾಂಬಾರು ಪದಾರ್ಥ ಬಳಕೆಗೆ, ನದಿ ತೀರ, ಬೆಟ್ಟ ಗುಡ್ಡ ರಕ್ಷಣೆಗೆ, ಗಾಳಿ ಮತ್ತು ವಾಹನ ಮಾಲೀನ್ಯ, ನಾಮ ಫಲಕ ಮತ್ತು ಜಾಹಿರಾತು ಅಳವಡಿಸಲು ಖಡ್ಡಾಯವಾಗಿ ಸಂಬಂಧಿಸಿದ ಇಲಾಖೆ/ಅಧಿಕಾರಿಗಳಿಂದ ಅನುಮತಿ ಪಡೆಯಬೇಕಾಗಿದೆ.
ಅನುಮತಿ ನೀಡುವ ಒಟ್ಟು 5 ಅಂಶವೆಂದರೆ ಇದೀಗ ಮಾಡುತ್ತಿರುವ ಕೃಷಿ ಮತ್ತು ತೋಟಗಾರಿಕೆ( ವಿಸ್ತರಿಸಲು ಅನುಮತಿ ಬೇಕು), ಮಳೆಕೊಯ್ಲು ನೀರು ಬಳಸಲು, ಜೈವಿಕ ಕೃಷಿ ಮಾಡಲು, ಪುನರ್ ಬಳಕೆ ಶಕ್ತಿ ಬಳಸಲು, ಹಸಿರು ತಂತ್ರಜ್ಞ ಬಳಸಲು ಮಾತ್ರಾ ಅವಕಾಶ ಕಲ್ಪಿಸಲಾಗಿದೆ.
ಈ ಮೇಲಿನ ಎಲ್ಲ ಅಂಶಗಳು ಶ್ರೀ ಸಾಮಾನ್ಯನ ದಿನ ನಿತ್ಯದ ಬದುಕಿಗೆ ಧಕ್ಕೆ ಆಗಲಿದ್ದು ವನ್ಯ ಪ್ರಾಣಿಗಳು ನಮ್ಮ ಮನೆ, ಕೆರೆ, ಬಾವಿಯ ಜಾಗಕ್ಕೆ ಬರಲು ಯಾವದೇ ಅಡ್ಡಿ ಮಾಡುವಂತಿಲ್ಲ. ತೋಟದಲ್ಲಿ ನೆರಳಿಗೆ ನೆಡುವ ಮರಗಳನ್ನು ಕಡಿಯುವ, ಮಾರಾಟ ಮಾಡುವ ಅವಕಾಶವಿಲ್ಲ. ಮನೆಗೆ ಇದೀಗ ಅಳವಡಿಸಿರುವ ಎಲ್ಲಾ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ, ಭೂಮಿಯ ಕೆಳಗೆ ಹಾಕಬೇಕಾಗಿದೆ. ಅನುಮತಿ ಪಡೆದು ಮಾಡಬಹುದಾದ 13 ಅಂಶಗಳು ತುಂಬಾ ಅಪಾಯಕಾರಿಯಾಗಿದ್ದು, ಅವರು ಹೇಳಿರುವ ಮಾಸ್ಟರ್ ಫ್ಲಾನ್ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅನುಮತಿ ಪಡೆಯಬೇಕಾದ ಇಲಾಖೆಯ ಮಾಹಿತಿ ಇಲ್ಲ. ಕಾಫಿ ತೋಟಕ್ಕೆ, ಕೃಷಿಗೆ ಅಂತರ್ಜಲ ಬಳಸಲು ನಿರ್ಬಂಧ, ಪರ್ಯಾಯ ಬೆಳೆ ಬೆಳೆಯಲು, ರಸ್ತೆ ವಿಸ್ತರಣೆಗೆ ಖಡ್ಡಾಯ ಅನುಮತಿ ಬೇಕಿರುವದು ಇದಕ್ಕೆಲ್ಲಾ ಪ್ರತ್ಯೇಕ ಪ್ರಾಧಿಕಾರ ಮಾಡಲಿದ್ದಾರೆ.
ರಾತ್ರಿ ವೇಳೆ ವಾಣಿಜ್ಯ ಉಪಯೋಗಕ್ಕೆ ವಾಹನ ಸಂಚಾರ ಅನುಮತಿ ಇತ್ಯಾದಿಯಲ್ಲದೆ, ಇದೀಗ ರಾಜ್ಯಾದ್ಯಂತ ಅರಣ್ಯ ಪ್ರದೇಶಗಳು ಹೊತ್ತಿ ಉರಿಯುತ್ತಿದ್ದು ಅರಣ್ಯ ಸಂರಕ್ಷಣೆಯಲ್ಲಿ ವಿಫಲವಾಗಿರುವ ಇಲಾಖೆ ಕೊಡಗಿನ ಜನತೆ ರಕ್ಷಣೆ ಮಾಡಿರುವ ಕಾಫಿ ತೋಟ, ಕೃಷಿ ಭೂಮಿಯನ್ನು ನಾಶ ಮಾಡಲು ಹೊರಟಂತಿದೆ ಎಂದು ಜೆಡಿಎಸ್ ಪ್ರಮುಖರು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಗಡಿಭಾಗ ಕುಟ್ಟದಲ್ಲಿ ನಡೆಯುವ ಬೃಹತ್ ಪ್ರತಿಭಟನೆಗೆ ಪಕ್ಷಾತೀತವಾಗಿ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.