ಶ್ರೀಮಂಗಲ, ಮಾ. 8: ರಾಜ್ಯದ ಕಾಫಿ ಬೆಳೆಗಾರರು ದೀರ್ಘಕಾಲದಿಂದ ಎದುರಿಸುತ್ತಿರುವ ಸಮಸ್ಯೆ ತಮಗೆ ಮನವರಿಕೆಯಾಗಿದೆ. ಈ ನಿಟ್ಟಿನಲ್ಲಿ ಇದರ ಪರಿಹಾರಕ್ಕೆ ಲೋಕಸಭೆ ಅಧಿವೇಶನದಲ್ಲಿ ಕೇಂದ್ರ ಸರಕಾರದ ಗಮನ ಸೆಳೆಯಲಾಗುವದು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಭರವಸೆ ನೀಡಿದ್ದಾರೆ.
ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ಅವರ ನಿವಾಸದಲ್ಲಿ, ಜಿಲ್ಲಾ ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರ ಮೂಲಕ ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟದ ನಿಯೋಗ ಭೇಟಿ ಮಾಡಿ, ಕಾಫಿ ಬೆಳೆಗಾರರು ದೀರ್ಘ ಕಾಲದಿಂದ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ನಿಯೋಗದ ಮನವಿಯನ್ನು ಸಂಪೂರ್ಣವಾಗಿ ಆಲಿಸಿದ ದೇವೇಗೌಡ ಅವರು, ಲೋಕಸಭೆ ಯಲ್ಲಿ ಗಮನ ಸೆಳೆಯುವದರೊಂದಿಗೆ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೂ ಪ್ರತ್ಯೇಕವಾಗಿ ಈ ಬಗ್ಗೆ ಮನವರಿಕೆ ಮಾಡುವ ಭರವಸೆಯನ್ನು ನೀಡಿದರು.
ಕೊಡಗಿನ ಕಾಫಿ ಬೆಳೆಗಾರರು ಉಳಿದರೆ ಮಾತ್ರ ಕಾವೇರಿ ನದಿ ಉಳಿಯುತ್ತದೆ. ಪರಿಸರ ಸ್ನೇಹಿಯಾದ ಕಾಫಿ ಬೆಳೆಯನ್ನು ಉಳಿಸಿಕೊಳ್ಳಲು ಸಮಸ್ಯೆ ಪರಿಹರಿಸಬೇಕು. ಈ ನಿಟ್ಟಿನಲ್ಲಿ ಬೆಳೆಗಾರರ ಎಲ್ಲಾ ಬ್ಯಾಂಕ್ ಸಾಲ ಮನ್ನಾ ಮಾಡಿ, ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ಪ್ರಕಟಿಸಲು ನಿಯೋಗ ಮನವಿ ಸಲ್ಲಿಸಿತು.
ಈ ಸಂದರ್ಭ ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ಸಲಹೆಗಾರ ಚೆಪ್ಪುಡಿರ ಶೆರಿ ಸುಬ್ಬಯ್ಯ, ನಿರ್ದೇಶಕ ಕೈಬುಲಿರ ಎಂ. ಹರೀಶ್, ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ ಮತ್ತಿತರರು ಹಾಜರಿದ್ದರು.