ಶಿರಂಗಾಲ, ಮಾ. 8: ಬಯಲು ಸೀಮೆ ಶಿರಂಗಾಲ ಗ್ರಾಮದಲ್ಲಿ ತಾ. 10 ರಂದು ಗ್ರಾಮದೇವತೆ ಶ್ರೀ ಮಂಟಿಗಮ್ಮ ದೇವಿಯ ಉತ್ಸವ ಮತ್ತು ಜಾತ್ರೋತ್ಸವ ನಡೆಯಲಿದೆ. ಗ್ರಾಮೀಣ ಭಾಗದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾದ ಮಂಟಿಗಮ್ಮ ದೇವಿಯ ಉತ್ಸವದಲ್ಲಿ ಮೈಸೂರು, ಹಾಸನ ಹಾಗೂ ಕೊಡಗು ಜಿಲ್ಲೆಯ ಗಡಿ ಗ್ರಾಮಗಳ ಜನರು ಸೇರಿದಂತೆ ವಿವಿಧೆಡೆಗಳಿಂದ ಸಾವಿರಾರು ಮಂದಿ ಭಕ್ತರು ಪಾಲ್ಗೊಳ್ಳುವರು.
ಅಂದು ಗ್ರಾಮದ ಕೋಟೆಯ ಗದ್ದಿಗೆಯಲ್ಲಿ ರಾತ್ರಿ ದೇವಿಗೆ ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದ ನಂತರ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ದೇವಿಯನ್ನು ಭಕ್ತಾದಿಗಳು ತಮಟೆ ಮತ್ತು ಮಂಗಳವಾದ್ಯದೊಂದಿಗೆ ಪವಿತ್ರ ಬನಕ್ಕೆ ದೇವಿಗೆ ಸಂಬಂಧಿಸಿದ ಆಭರಣಗಳನ್ನೊಳಗೊಂಡ ಬುಟ್ಟಿ ಮತ್ತಿತರರ ಸಾಂಪ್ರದಾಯಿಕ ಸಾಮಗ್ರಿಗಳನ್ನು ಮೆರವಣಿಗೆ ಮೂಲಕ ಕೊಂಡೊಯ್ಯುತ್ತಾರೆ.
ದೇವಿಯ ಬನದಲ್ಲಿ ಹಾಕಿರುವ ಅಗ್ನಿಕುಂಡವನ್ನು ಹರಕೆ ಹೊತ್ತ ಭಕ್ತಾದಿಗಳು ತುಳಿದು ದೇವರ ದರ್ಶನ ಪಡೆಯುವರು. ಹಬ್ಬದ ಅಂಗವಾಗಿ ಗ್ರಾಮದ ಸಂತೆಮಾಳ ಮೈದಾನದಲ್ಲಿ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಕ್ರೀಡಾಕೂಟ: ಶಿರಂಗಾಲ ಶ್ರೀ ಮಂಟಿಗಮ್ಮ ಗ್ರಾಮ ದೇವತಾ ಸಮಿತಿ ವತಿಯಿಂದ ಉತ್ಸವದ ಅಂಗವಾಗಿ ತಾ. 15 ರವರೆಗೆ ವಿವಿಧ ಕ್ರೀಡಾಕೂಟ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ತಾ. 10 ರಂದು ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿ, ತಾ. 11 ರಂದು ಸಂಜೆ 6 ಗಂಟೆಗೆ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಹಾಗೂ ತಾ. 12 ರಂದು ಮಹಿಳೆಯರಿಗೆ ಥ್ರೋಬಾಲ್ ಮತ್ತು ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸ ಲಾಗಿದೆ. ಅಂದು ರಾತ್ರಿ 9 ಗಂಟೆಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಾಯೋಜಕತ್ವದಲ್ಲಿ ಸುಗ್ಗಿ, ಕೊಡವ, ಗಿರಿಜನ ಜಾನಪದ ನೃತ್ಯ, ಹರಿಕಥೆ, ಸುಗಮ ಸಂಗೀತ ಏರ್ಪಡಿಸಲಾಗಿದೆ.
ರಥೋತ್ಸವ: ತಾ. 13 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಉಮಾಮಹೇಶ್ವರ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ನಂತರ ಮಧ್ಯಾಹ್ನ 12 ಗಂಟೆಗೆ ಮಂಗಳವಾದ್ಯ ಹಾಗೂ ಪೂಜಾ ಕುಣಿತ, ನಂದಿಧ್ವಜ ಕುಣಿತ, ವೀರಭದ್ರೇಶ್ವರ ಕುಣಿತ, ಕಂಸಾಳೆ, ಕೀಲು ಕುದುರೆಗಳೊಂದಿಗೆ ಶ್ರೀ ಉಮಾಮಹೇಶ್ವರ ರಥೋತ್ಸವ ಜರುಗಲಿದೆ.